×
Ad

ಅದಾನಿಯ ಆಸ್ಟ್ರೇಲಿಯಾ ಗಣಿಗಾರಿಕೆ ವಿರುದ್ಧ ಧ್ವನಿ ಎತ್ತಿದ ಗ್ರೇಟಾ ತನ್‌ಬರ್ಗ್

Update: 2020-01-12 09:18 IST

ಹೊಸದಿಲ್ಲಿ, ಜ.12: ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಆರಂಭಿಸುವ ಅದಾನಿ ಯೋಜನೆ ವಿರುದ್ಧದ ಹೋರಾಟಕ್ಕೆ ಹೊಸ ಶಕ್ತಿ ಬಂದಿದ್ದು, ಹದಿಹರೆಯದ ಹವಾಮಾನ ಚಳವಳಿಗಾರ್ತಿ ಸ್ವೀಡನ್‌ನ ಗ್ರೇಟಾ ತನ್‌ಬರ್ಗ್ ಟ್ವೀಟ್ ಮೂಲಕ ಅದಾನಿ ಯೋಜನೆ ಸ್ಥಗಿತಗೊಳಿಸುವಂತೆ ಆಗ್ರಹಿಸಿದ್ದಾರೆ.

# ಸ್ಟಾಪ್‌ಅದಾನಿ ಹ್ಯಾಶ್‌ಟ್ಯಾಗ್ ನೊಂದಿಗೆ ಟ್ವೀಟ್ ಮಾಡಿರುವ ಅವರು, ಆಸ್ಟ್ರೇಲಿಯಾದಲ್ಲಿ ಕಲ್ಲಿದ್ದಲು ಗಣಿ ನಿರ್ಮಿಸುವ ಯೋಜನೆಯನ್ನು ಸ್ಥಗಿತಗೊಳಿಸುವಂತೆ, ವಿಳಂಬ ಮಾಡುವಂತೆ ಅಥವಾ ಅಡ್ಡಿಪಡಿಸುವಂತೆ ಜರ್ಮನಿಯ ಪ್ರಮುಖ ಎಂಜಿನಿಯರಿಂಗ್ ಕಂಪನಿಯಾದ ಸಿಮನ್ಸ್‌ಗೆ ಮನವಿ ಮಾಡಿದ್ದಾರೆ.

"ಆಸ್ಟ್ರೇಲಿಯಾದಲ್ಲಿ ಬೃಹತ್ ಅದಾನಿ ಕಲ್ಲಿದ್ದಲು ಗಣಿಯನ್ನು ತಡೆಯುವ, ವಿಳಂಬಿಸುವ ಅಥವಾ ಕನಿಷ್ಠ ಪಕ್ಷ ಅಡ್ಡಿಪಡಿಸುವ ಶಕ್ತಿ ಇರುವುದು ಸಿಮನ್ಸ್‌ ಡಿಇಗೆ ಮಾತ್ರ. ಸೋಮವಾರ ಸಿಮನ್ಸ್ ತನ್ನ ನಿರ್ಧಾರ ಪ್ರಕಟಿಸಲಿದೆ. ಸರಿಯಾದ ನಿರ್ಧಾರವನ್ನೇ ಕೈಗೊಳ್ಳುವಂತೆ ಒತ್ತಡ ಹೇರಲು ದಯವಿಟ್ಟು ಸಹಕರಿಸಿ" ಎಂದು ತನ್‌ಬರ್ಗ್ ಹೇಳಿದ್ದಾರೆ.

ಅದಾನಿ ಜತೆ ಮಾಡಿಕೊಂಡ ಗುತ್ತಿಗೆಯನ್ನು ರದ್ದುಪಡಿಸಲು ಒತ್ತಡ ತರುವಂತೆ ಅವರು ನೆಟ್ಟಿಗರಲ್ಲಿ ಕೋರಿದ್ದಾರೆ. ಅದಾನಿ ಸಮೂಹದ ಕಾರ್ಮಿಚೆಲ್ ಗಣಿಗೆ 20 ದಶಲಕ್ಷ ಡಾಲರ್ ಮೌಲ್ಯದ ರೈಲ್ವೆ ಮೂಲಸೌಕರ್ಯವನ್ನು ಒದಗಿಸುವ ಗುತ್ತಿಗೆಯಿಂದ ಹಿಂದೆ ಸರಿಯುವಂತೆ ಅವರು ಸಿಮನ್ಸ್‌ಗೆ ಮನವಿ ಮಾಡಿದ್ದಾರೆ. ಪರಿಸರಪ್ರೇಮಿಗಳಿಂದ ಈ ಯೋಜನೆಗೆ ವ್ಯಾಪಕ ಪ್ರತಿರೋಧ ವ್ಯಕ್ತವಾಗುತ್ತಿದೆ.

ಸೋಮವಾರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸಿಮನ್ಸ್ ಪ್ರಕಟಿಸಿದೆ. ಹವಾಮಾನ ಬದಲಾವಣೆ ತಡೆಯುವ ಮಾರ್ಗೋಪಾಯಗಳ ಬಗ್ಗೆ ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಪರಿಣಾಮಕಾರಿ ಭಾಷಣ ಮಾಡುವ ಮೂಲಕ ತನ್‌ರ್ಗ್ ವಿಶ್ವದ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News