2 ಸೂರ್ಯರಿರುವ ಗ್ರಹ ಪತ್ತೆ ಮಾಡಿದ 17ರ ಪೋರ!
ವಾಷಿಂಗ್ಟನ್, ಜ.12: ನಾಸಾದ ಟ್ರಾನ್ಸಿಸ್ಟಿಂಗ್ ಎಕ್ಸ್‌ಪ್ಲೊನೆಂಟ್ ಸರ್ವೇ ಉಪಗ್ರಹ (ಟಿಇಎಸ್‌ಎಸ್) ಮಿಷಿನ್ ನಮ್ಮ ಸೌರಮಂಡಲದಿಂದ ಹೊರಗೆ ಇರುವ ಹಲವು ಗ್ರಹಗಳನ್ನು ಪತ್ತೆ ಮಾಡಿದ್ದು, ಇತ್ತೀಚೆಗೆ ಒಂದು ಗ್ರಹವನ್ನು ಪತ್ತೆ ಮಾಡಿದ್ದು ಒಬ್ಬ ಪ್ರೌಢಶಾಲಾ ವಿದ್ಯಾರ್ಥಿ!
ನಾಸಾದ ಗಬ್ಬರ್ಡ್ ಸ್ಪೇಸ್ ಫ್ಲೈಟ್ ಸೆಂಟರ್‌ನಲ್ಲಿ ಇಂಟರ್ನಿಯಾಗಿರುವ ವೂಲ್ಫ್ ಕುಕೆರ್ (17) ಎಂಬ ವಿದ್ಯಾರ್ಥಿ ಈ ಅಪೂರ್ವ ಸಾಧನೆ ಮಾಡಿದ್ದಾನೆ. ಪಿಕ್ಟರ್ ಎಂಬ ನಕ್ಷತ್ರಪುಂಜದಲ್ಲಿ ಎರಡು ನಕ್ಷತ್ರಗಳ ಸುತ್ತ ಸುತ್ತುತ್ತಿರುವ ಗ್ರಹವನ್ನು ಈತ ಪತ್ತೆ ಹೆಚ್ಚಿದ್ದಾನೆ. ಇದು ಭೂಮಿಯಿಂದ ಸುಮಾರು 1,300 ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ.
ಟಿಓಐ 1388ಬಿ ಎಂದು ಹೆಸರಿಸಲಾಗಿರುವ ಈ ನೂತನ ಗ್ರಹದ ಗಾತ್ರ ನೆಪ್ಚೂನ್ ಮತ್ತು ಶನಿ ಗ್ರಹದ ನಡುವೆ ಇದ್ದು, ಸೂರ್ಯನಿಗಿಂತ ಶೇಕಡ 15ರಷ್ಟು ದೊಡ್ಡದಾದ ಎರಡು ನಕ್ಷತ್ರಗಳ ಸುತ್ತ ಸುತ್ತುತ್ತಿದೆ. ಮತ್ತೊಂದು ನಕ್ಷತ್ರ ತೀರಾ ಚಿಕ್ಕದು ಎಂದು ಹೇಳಲಾಗಿದೆ.
"ನನ್ನ ಇಂಟರ್ನ್‌ಶಿಪ್‌ನ ಮೂರನೇ ದಿನ, ಟಿಓಐ 1338ಬಿನಿಂದ ಸಂಕೇತಗಳನ್ನು ಕಂಡೆ. ಮೊದಲು ಅದನ್ನು ತಾರಾ ಗ್ರಹಣ ಎಂದುಕೋಂಡೆ. ಆದರೆ ಅದು ವಾಸ್ತವವಾಗಿ ಗ್ರಹವಾಗಿತ್ತು" ಎಂದು ಕೂಕೆರ್ ವಿವರಿಸಿದ್ದಾನೆ.