×
Ad

ಮಂಗಳೂರು: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನಿಂದ ‘ಶಿಕ್ಷಕರೊಂದಿಗೆ ಒಂದು ದಿನ’ ಕಾರ್ಯಕ್ರಮ

Update: 2020-01-12 17:41 IST

ಮಂಗಳೂರು, ಜ.12: ನಗರದ ಪ್ರತಿಷ್ಠಿತ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ‘ಶಿಕ್ಷಕರೊಂದಿಗೆ ಒಂದು ದಿನ’ ನೆಚ್ಚಿನ ಶಿಕ್ಷಕರು/ಉಸ್ತಾದ್ ಪ್ರಶಸ್ತಿ ಕಾರ್ಯಕ್ರಮವು ನಗರದ ಕಂಕನಾಡಿಯ ಟ್ಯಾಲೆಂಟ್ ಸಭಾಭವನದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ಪಿ.ಎ.ಇಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಅಬ್ದುಲ್ ಶರೀಫ್, ಮನೆಯೇ ಮೊದಲ ಪಾಠಶಾಲೆ; ತಾಯಿಯೇ ಮೊದಲ ಗುರುವಾದರೂ ಉತ್ತಮ ಶಿಕ್ಷಣ ನೀಡುವುದು ಶಿಕ್ಷಕನ ಕರ್ತವ್ಯ. ಪ್ರತಿಯೊಬ್ಬ ಶಿಕ್ಷಕರೂ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರ ಜತೆಗೆ ಶಿಸ್ತು, ಸಂಯಮ ಪಾಲನೆ ಮಾಡಲು ಮಾರ್ಗದರ್ಶನ ನೀಡಬೇಕು. ಆಗ ಮಾತ್ರ ಶಿಕ್ಷಕನ ಜವಾಬ್ದಾರಿ ಪೂರ್ಣಗೊಳ್ಳುತ್ತದೆ ಎಂದರು.

ಉದ್ಯಮಿ, ಸಮಾಜ ಸೇವಕ ಗಿಲ್ಬರ್ಟ್ ಡಿಸೋಜ ಮಾತನಾಡಿ, ಜನ್ಮ ಪಡೆದ ಪ್ರತಿಯೊಬ್ಬ ಮನುಷ್ಯನಲ್ಲೂ ದೇವರು ಪ್ರತಿಭೆಯನ್ನು ಕೊಡುಗೆಯಾಗಿ ನೀಡಿರುತ್ತಾನೆ. ಮಾನವನಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಪುಣ್ಯಕಾರ್ಯ. ಪ್ರತಿಭೆಯ ಅನ್ವೇಷಣೆಯಿಂದ ಆತನೊಬ್ಬನಿಗೆ ಮಾತ್ರವಲ್ಲ, ಇಡೀ ಸಮಾಜಕ್ಕೆ ಅನುಕೂಲವಾಗಲಿದೆ ಎಂದು ಹೇಳಿದರು.

ಮಿಸ್ಬಾ ನಾಲೆಡ್ಜ್ ಫೌಂಡೇಶನ್ ಸಂಸ್ಥಾಪಕ, ಉದ್ಯಮಿ ಮುಮ್ತಾಝ್ ಅಲಿ ಮಾತನಾಡಿ, ಒಂದು ಕಾಲದಲ್ಲಿ ತಂದೆ ತಾಯಿಯನ್ನೇ ಗುರುಗಳೆಂದು ಪೂಜಿಸಲಾಗುತ್ತಿತ್ತು. ಆಧುನಿಕ ಯುಗದಲ್ಲಿ ಶಿಕ್ಷಕರು ಅತ್ಯುತ್ತಮ ಶಿಕ್ಷಣ ನೀಡುತ್ತಿರುವುದು ಶಿಕ್ಷಣದ ಅಗತ್ಯವನ್ನು ಪ್ರತಿಬಿಂಬಿಸುತ್ತಿದೆ. ಪ್ರತಿಭೆಗಳನ್ನು ಗುರುತಿಸುವ ಟ್ಯಾಲೆಂಟ್ ಫೌಂಡೇಶನ್ ಸಂಸ್ಥೆಯು ಇಂದು ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸನ್ಮಾನಿಸುತ್ತಿದೆ. ಪ್ರತಿ ಬಾರಿಯೂ ವಿನೂತನ ಕಾರ್ಯಕ್ರಮ ಆಯೋಜಿಸುತ್ತಾ ಟಿಆರ್‌ಎಫ್ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಮಾದರಿಯಾಗಿದೆ ಎಂದು ಹೇಳಿದರು.

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಬೆಂಗಳೂರಿನ ಉದ್ಯಮಿ ಬಿ.ಎಂ.ಉಮರ್ ಅವರಿಗೆ ‘ಟ್ಯಾಲೆಂಟ್ ಸಮಾಜಸೇವೆ ಪ್ರಶಸ್ತಿ-2020’ನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅಬೂಬಕರ್ ಕುಕ್ಕಾಡಿ, ಮರ್ವ ಬಿಲ್ಡರ್ಸ್ ಆ್ಯಂಡ್ ಡೆವಲಪರ್ಸ್‌ನ ಅಬ್ದುಲ್ ರಶೀದ್ ಮತ್ತಿತರರು ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಸ್ವಾಗತಿಸಿದರು. ಕಾರ್ಯದರ್ಶಿ ಅಬ್ದುಲ್ ಹಮೀದ್ ಕಣ್ಣೂರು ಕಿರಾಅತ್ ಪಠಿಸಿದರು. ಸಲಹೆಗಾರ ಸಲಾಂ ಉಸ್ತಾದ್ ಪೆರ್ನೆ ಕಾರ್ಯಕ್ರಮದಲ್ಲಿ ಸಮಾರೋಪಗೈದರು. ಮುಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು. ಮಜೀದ್ ತುಂಬೆ ವಂದಿಸಿದರು. ಅಬ್ದುಲ್ ಹಕೀಂ, ಬಡಿಲ ಹುಸೈನ್ ಸಹಕರಿಸಿದರು.

ಶಿಕ್ಷಕರಿಗೆ ಸನ್ಮಾನ

ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಅವರು ರಾಧಾಕೃಷ್ಣ ನಕ್ಷತ್ರಿ ಹಾಗೂ ಉಸ್ತಾದ್ ಅಬ್ದುಲ್ ಸಲಾಂ ಮದನಿ ಅವರನ್ನು ಸನ್ಮಾನಿಸಿದರು.

ಕೊಣಾಜೆಯ ಸ್ನೇಹದೀಪ ಸಂಸ್ಥೆಯ ಸಂಸ್ಥಾಪಕಿ ತಬಸ್ಸುಮ್ ಅವರು ಶಿಕ್ಷಕ ವಿ.ಎಸ್.ಕರ್ಕಡ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಮೆಲ್ಕಾರ್ ಮಹಿಳಾ ಕಾಲೇಜು ಉಪನ್ಯಾಸಕ ಅಬ್ದುಲ್ ಮಜೀದ್ ಅವರು ಶಿಕ್ಷಕಿ ಸುಧಾ ನಾಗೇಶ್ ಹಾಗೂ ಮಾಹಿನ್ ದಾರಿಮಿ ಅವರನ್ನು ಸನ್ಮಾನಿಸಿದರು.

ಕಣ್ಣೂರು ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಶಂಶಾದ್ ಹರೇಕಳ ಅವರು ತಮ್ಮ ಶಿಕ್ಷಕ ತ್ಯಾಗಂ ಹರೇಕಳ ಅವರನ್ನು ಗೌರವಿಸಿದರು. ವಿಶ್ವಾಸ್‌ ಬಾವ ಬಿಲ್ಡರ್ಸ್‌ನ ವ್ಯವಸ್ಥಾಪಕ ಮುಹಮ್ಮದ್ ಫರ್ವೇಝ್ ಅವರು ಶಿಕ್ಷಕಿ ಫ್ರಾನ್ಸಿಸ್ ಪಿಂಟೊ ಹಾಗೂ ಪಡೀಲ್‌ನ ಉಸ್ತಾದ್ ಮುಹಮ್ಮದ್ ಇಸ್ಮಾಯೀಲ್ ಅವರನ್ನು ಸನ್ಮಾನಿಸಿದರು. ನಾಟೇಕಲ್‌ನ ಡಾ.ಫಯಾಝ್ ಅವರು ಮುರಿಗಯ್ಯ ಕೊಗನೂರುಮಠ ಅವರನ್ನು ಗೌರವಿಸಿದರು.

ಟಿಆರ್‌ಎಫ್ ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು ಅವರು ಉಸ್ತಾದ್ ಅಬ್ದುಲ್ ಕರೀಂ ಮದನಿ ಅವರನ್ನು ಸನ್ಮಾನಿಸಿದರು. ಹಾರಿಸ್ ಸುರಿಬೈಲ್ ಅವರು ಶಿಕ್ಷಕ ನಾರಾಯಣ್ ನಾಯಕ್ ಅವರನ್ನು ಸನ್ಮಾನಿಸಿದರು. ಮಿಸ್ಬಾ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ, ಉದ್ಯಮಿ ಮುಮ್ತಾಝ್ ಅಲಿ ಟಿಆರ್‌ಎಫ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಅವರನ್ನು ಸನ್ಮಾನಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News