ಭಾರತ, ಚೀನಾ ವಿರೋಧಿಸುವ ಯೋಜನೆಗಳನ್ನು ಕೈಬಿಡಲು ನೇಪಾಳ ತೀರ್ಮಾನ

Update: 2020-01-12 14:52 GMT

ಕಠ್ಮಂಡು (ನೇಪಾಳ), ಜ. 12: ಭಾರತ ಮತ್ತು ಚೀನಾ ದೇಶಗಳೊಂದಿಗೆ ನೇಪಾಳ ಹೊಂದಿರುವ ಸಂಬಂಧವನ್ನು ಹಾಳುಗೆಡವಬಲ್ಲ ಕಾರ್ಯಕ್ರಮಗಳನ್ನು ವಿದೇಶಿ ಸರಕಾರೇತರ ಸಂಘಟನೆ (ಎನ್‌ಜಿಒ)ಗಳು ನಡೆಸುವುದನ್ನು ತಡೆಯುವ ಉದ್ದೇಶದ ನೀತಿಯೊಂದನ್ನು ನೇಪಾಳದ ಸಮಾಜ ಕಲ್ಯಾಣ ಮಂಡಳಿ ರೂಪಿಸುತ್ತಿದೆ.

‘‘ನೇಪಾಳವು ಸುತ್ತಲೂ ಭೂಮಿಯಿಂದ ಆವೃತವಾಗಿರುವ ದೇಶ ಹಾಗೂ ಅದರ ಉತ್ತರ ಮತ್ತು ದಕ್ಷಿಣಕ್ಕೆ ಬೃಹತ್ ಜನಸಂಖ್ಯೆಗಳನ್ನು ಒಳಗೊಂಡ ಎರಡು ಬೃಹತ್ ದೇಶಗಳಿವೆ’’ ಎಂದು ಸರಕಾರ ರೂಪಿಸುತ್ತಿರುವ ನೀತಿಯ ಕರಡು ಪ್ರತಿ ಹೇಳುತ್ತದೆ ಎಂದು ‘ಕಠ್ಮಂಡು ಪೋಸ್ಟ್’ ವರದಿ ಮಾಡಿದೆ.

‘‘ನೆರೆ ದೇಶಗಳೊಂದಿಗೆ ಸಮತೋಲಿತ ಸಂಬಂಧಗಳನ್ನು ಹೊಂದುವ ನೇಪಾಳದ ವಿದೇಶ ನೀತಿಯ ಆಧಾರದಲ್ಲಿ, ಯಾವುದೇ ನೆರೆ ದೇಶವು ವಿರೋಧಿಸುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದಿಲ್ಲ’’ ಎಂದು ಕರಡು ನೀತಿ ಹೇಳುತ್ತದೆ.

ನೀತಿಯು ಈಗಲೂ ಕರಡು ರಚನೆ ಹಂತದಲ್ಲಿದೆ ಹಾಗೂ ಅದರ ಕೆಲವು ವಿಧಿಗಳನ್ನು ಎನ್‌ಜಿಒಗಳ ನೋಂದಣಿಗೆ ಸಂಬಂಧಿಸಿದ ನೂತನ ಕಾನೂನಿನಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದರು.

ಎನ್‌ಜಿಒಗಳ ಚಟುವಟಿಕೆಗಳು, ಅದರಲ್ಲೂ ಗಡಿ ಪ್ರದೇಶಗಳಲ್ಲಿ ಅವುಗಳು ನಡೆಸುತ್ತಿರುವ ಚಟುವಟಿಕೆಗಳ ಬಗ್ಗೆ ಎರಡು ನೆರೆಯ ದೇಶಗಳು ವ್ಯಕ್ತಪಡಿಸಿರುವ ಕಳವಳಗಳನ್ನು ನಿವಾರಿಸುವ ಉದ್ದೇಶವನ್ನು ನೂತನ ನೀತಿಯು ಹೊಂದಿದೆ ಎಂದು ಮಂಡಳಿಯಲ್ಲಿರುವ ಮಾಹಿತಿ ಅಧಿಕಾರಿ ದುರ್ಗಾಪ್ರಸಾದ್ ಭಟ್ಟಾರಾಯ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News