×
Ad

ಅಮೆರಿಕದಿಂದ ಸೌದಿಯ ಹಲವು ತರಬೇತಿ ಸೈನಿಕರ ಉಚ್ಚಾಟನೆ

Update: 2020-01-12 20:22 IST

ವಾಶಿಂಗ್ಟನ್, ಜ. 12: ಅಮೆರಿಕದ ಸೇನಾ ನೆಲೆಗಳಲ್ಲಿ ತರಬೇತಿ ಪಡೆಯುತ್ತಿರುವ ಸೌದಿ ಅರೇಬಿಯದ ಡಝನ್‌ಗೂ ಅಧಿಕ ಸೈನಿಕರನ್ನು ಅಮೆರಿಕದಿಂದ ಉಚ್ಚಾಟಿಸಲಾಗುವುದು ಎಂದು ಸಿಎನ್‌ಎನ್ ಶನಿವಾರ ವರದಿ ಮಾಡಿದೆ.

ಡಿಸೆಂಬರ್ 6ರಂದು ಫ್ಲೋರಿಡದಲ್ಲಿರುವ ಅಮೆರಿಕನ್ ನೌಕಾ ನೆಲೆಯೊಂದರಲ್ಲಿ ಸೌದಿ ವಾಯುಪಡೆ ಅಧಿಕಾರಿಯೊಬ್ಬರು ಗುಂಡು ಹಾರಾಟ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಈ ನಿರ್ಧಾರಕ್ಕೆ ಬಂದಿದೆ.

ಪೆನ್ಸಕೋಲ ನೆಲೆಯಲ್ಲಿ ಸೌದಿ ವಾಯುಪಡೆಯ ಸೆಕಂಡ್ ಲೆಫ್ಟಿನೆಂಟ್ ನಡೆಸಿದ ಗುಂಡು ಹಾರಾಟದಲ್ಲಿ ಅಮೆರಿಕದ ಮೂವರು ನೌಕಾ ಪಡೆ ಸೈನಿಕರು ಹತರಾಗಿದ್ದಾರೆ. ಹಂತಕ 21 ವರ್ಷದ ಮುಹಮ್ಮದ್ ಸಯೀದ್ ಅಲ್ಶಮ್ರಾನಿಯನ್ನು ಬಳಿಕ ಪೊಲೀಸರು ಸ್ಥಳದಲ್ಲೇ ಗುಂಡು ಹಾರಿಸಿ ಕೊಂದಿದ್ದಾರೆ.

ಆದರೆ, ಉಚ್ಚಾಟಿಸಲ್ಪಟ್ಟಿರುವ ಸೌದಿ ವಾಯು ಪಡೆ ಸೈನಿಕರು ಹಂತಕ ವಾಯು ಪಡೆ ಅಧಿಕಾರಿಗೆ ನೆರವು ನೀಡಿದ ಆರೋಪವನ್ನು ಎದುರಿಸುತ್ತಿಲ್ಲ ಎಂದು ಸಿಎನ್‌ಎನ್ ಹೇಳಿದೆ.

ಈ ಹತ್ಯಾಕಾಂಡದ ಬಳಿಕ, ಸೌದಿ ಅರೇಬಿಯದ ಸೇನಾ ಸಿಬ್ಬಂದಿಗೆ ಅಮೆರಿಕದಲ್ಲಿ ನೀಡಲಾಗುತ್ತಿರುವ ಎಲ್ಲ ತರಬೇತಿಯನ್ನು ಮುಂದಿನ ಸೂಚನೆವರೆಗೆ ಪೆಂಟಗನ್ ನಿಲ್ಲಿಸಿದೆ. ಅಮೆರಿಕದಲ್ಲಿ ಸೌದಿ ಅರೇಬಿಯದ ಸುಮಾರು 850 ಸೇನಾ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News