×
Ad

ರಾಮಕೃಷ್ಣ ಮಠದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Update: 2020-01-12 20:53 IST

ಮಂಗಳೂರು, ಜ.12: ನಗರದ ಮಂಗಳಾದೇವಿಯ ರಾಮಕೃಷ್ಣ ಮಠದ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 158ನೇ ಜನ್ಮಜನ ಅಂಗವಾಗಿ ರವಿವಾರ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ‘ಸ್ವಾಮಿ ವಿವೇಕಾನಂದರು ಮೇರು ಪರ್ವತದಂತಿದ್ದು, ಅವರ ಬಗ್ಗೆ ಓದಿ ತಿಳಿದಷ್ಟು ಅಗಾಧ ಜ್ಞಾನ ಲಭಿಸುತ್ತದೆ’ ಎಂದು ಹೇಳಿದರು.

ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ದಿಕ್ಸೂಚಿ ಭಾಷಣ ಮಾಡಿ, ಸ್ವಾಮಿ ವಿವೇಕಾನಂದರಿಗೆ ಯುವಕರ ಬಗ್ಗೆ ಭರವಸೆ ಇತ್ತು. ಯುವಕರು ಬಲಿಷ್ಠರಾದರೆ ದೇಶ ಬಲಿಷ್ಠವಾದಂತೆ. ಯುವಕರಿಗೆ ವಿವೇಕಾನಂದರು ಆದರ್ಶವಾಗಬೇಕು. ರಾಷ್ಟ್ರ ನಿರ್ಮಾಣದ ಶಿಕ್ಷಣ ಪಡೆದು, ಶಿಸ್ತು-ತಾಳ್ಮೆ, ವೌಲ್ಯಗಳಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.

ರಥಬೀದಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಹೆಬ್ಬಾರ್ ಅತಿಥಿಯಾಗಿ ಭಾಗವಹಿಸಿದ್ದರು. ವಿಜಯಪುರ ಶಾಂತಿ ಕುಟೀರದ ಶ್ರೀಕೃಷ್ಣ ಸಂಪಗಾಂವ್ಕರ್‌ರಿಂದ ಸ್ವಾಮಿ ವಿವೇಕಾನಂದರ ಬಗ್ಗೆ ಏಕಪಾತ್ರಾಭಿನಯ ನಡೆಯಿತು.
ರಾಷ್ಟ್ರಪತಿಯವರಿಂದ ವಿಶೇಷ ಪುರಸ್ಕಾರ ಪಡೆದ ಪುತ್ತೂರಿನ ಯುವ ಸಾಧಕ ಸ್ವಸ್ತಿಕ್ ಪದ್ಮ, ನಡೆದಾಡುವ ಕಂಪ್ಯೂಟರ್ ಎಂಬ ಖ್ಯಾತಿಯ ಅಂಧ ಸಾಧಕ ಬಸವರಾಜ್ ಉಮ್ರಾಣಿ ಮತ್ತು ಯುವಸಾಧಕಿ, ಉಪನ್ಯಾಸಕಿ ರಮ್ಯಾ ಐತಾಳ ಅವರೊಂದಿಗೆ ‘ನನ್ನಲ್ಲಿ ನನಗೆ ನಂಬಿಕೆಯಿರಬೇಕು’ ಎಂಬ ವಿಷಯ ಕುರಿತು ಸಂವಾದ ನಡೆಯಿತು.

ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂವಾದ ನಿರೂಪಿಸಿದರು. ಸ್ವಚ್ಛ ಮನಸ್ ಯೋಜನೆಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಸ್ವಾಗತಿಸಿರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News