×
Ad

ಮಂಗಳೂರು: ಕೇರಳ ವಿದ್ಯಾರ್ಥಿ ಅಪಹರಣ; ಐವರಿಗೆ ಜೀವಾವಧಿ ಶಿಕ್ಷೆ

Update: 2020-01-12 21:59 IST

ಮಂಗಳೂರು, ಜ.12: ನಗರದ ಹೊರವಲಯದ ಸುರತ್ಕಲ್ ಸಮೀಪದ ಖಾಸಗಿ ಕಾಲೇಜೊಂದರ ವಿದ್ಯಾರ್ಥಿಯ ಅಪಹರಣ ಹಾಗೂ ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಜಿಲ್ಲಾ 4ನೇ ಹೆಚ್ಚುವರಿ ಸತ್ರ ನ್ಯಾಯಾಲಯವು ಐವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಂಜಿಮೊಗರು ನಿವಾಸಿ ಮುಹಮ್ಮದ್ ತಬ್ಸೀದ್ (24), ಮರಕಡದ ನಿವಾಸಿ ಸೈಯದ್ ಆಫ್ರಿದಿ (24), ಕುಂಜತ್‌ಬೈಲ್‌ನ ಮುಹಮ್ಮದ್ ಮುಕ್ಸಿತ್ (24), ಮೂಡುಬಿದಿರೆಯ ಅಹ್ಮದ್ ಹುಸೈನ್ (24), ಖಾದರ್ ಸಫ್ವಾ (24) ಜೀವಾವಧಿ ಶಿಕ್ಷೆಗೊಳಗಾದವರು.

ಪ್ರಕರಣ ವಿವರ: 2015ರಲ್ಲಿ ಕೇರಳ ಮೂಲದ ರಾಝಿಕ್ ಎಂಬಾತ ಸುರತ್ಕಲ್‌ನ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಯುವಕನಿಗೆ ತಂದೆ ಹೊಸದಾದ ದುಬಾರಿ ಮೊಬೈಲ್ ಕೊಟ್ಟಿದ್ದರು. ಅದನ್ನು ಮಾರಾಟ ಮಾಡಲು ‘ಒಎಲ್‌ಎಕ್ಸ್’ನಲ್ಲಿ ಮೊಬೈಲ್‌ನ ಚಿತ್ರ ಪ್ರಕಟಿಸಿ, ಅದರ ಬೆಲೆಯ ಜತೆಗೆ ಸಂಪರ್ಕ ನಂಬರ್‌ನ್ನು ನಮೂದಿಸಿದ್ದ. ಈತನನ್ನು ಸಂಪರ್ಕಿಸಿದ ಆರೋಪಿಗಳು ಮಾತುಕತೆಗೆಂದು ಕರೆದಿದ್ದಾರೆ. ಬಳಿಕ ಎಟಿಣಂನಲ್ಲಿ ಹಣ ಡ್ರಾ ಮಾಡಿಕೊಂಡು ಕೊಡುವುದಾಗಿ ಹೇಳಿದ ಆರೋಪಿಗಳು ಯುವಕನನ್ನು ಅಪಹರಿಸಿ, ಸ್ವಲ್ಪ ದೂರ ಕರೆದೊಯ್ದು ಮೊಬೈಲ್ ಕಸಿದುಕೊಂಡಿದ್ದಾರೆ. ಯುವಕನಿಗೆ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ್ದಾಗಿ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ರಾಮಲಿಂಗೇಗೌಡರು, ವಿದ್ಯಾರ್ಥಿಯ ಅಪಹರಣ ಪ್ರಕರಣ ಸಾಬೀತಾದ ಬಳಿಕ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 364 (ಎ) (ಅಪಹರಣ), 395 (ದೌರ್ಜನ್ಯ), 506 (ಕೊಲೆ ಬೆದರಿಕೆ)ರ ಪ್ರಕಾರ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ, ತಲಾ ಆರು ಸಾವಿರ ರೂ. ದಂಡ ವಿಧಿಸಿದ್ದಾರೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ಹರೀಶ್ಚಂದ್ರ ಉದ್ಯಾವರ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News