ಸಿಎಎ ಪ್ರತಿಭಟನಕಾರರ ಧ್ವನಿ ಅಡಗಿಸಲು ಮೋದಿಗೆ ಅಸಾಧ್ಯ: ಯೆಚೂರಿ

Update: 2020-01-12 16:31 GMT

ಹೊಸದಿಲ್ಲಿ,ಜ.12: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾನೋಂದಣಿ (ಎನ್‌ಪಿಆರ್) ವಿರುದ್ಧ ಪ್ರತಿಭಟಿಸುತ್ತಿರುವವರ ಧ್ವನಿಗಳನ್ನು ಅಡಗಿಸಲು ಸಾಧ್ಯವಿಲ್ಲವೆಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯಚೂರಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶನಿವಾರ ಪಶ್ಚಿಮಬಂಗಾಳ ಭೇಟಿ ನೀಡಿದ ಸಂದರ್ಭ ವ್ಯಾಪಕ ಪ್ರತಿಭಟನೆಗಳು ನಡೆದಿರುವುದನ್ನು ಅವರು ಶ್ಲಾಘಿಸಿದ್ದಾರೆ.

   ಸಿಎಎ, ಎನ್‌ಆರ್‌ಸಿ ವಿರುದ್ಧ ಶನಿವಾರ ಕೋಲ್ಕತಾದಲ್ಲಿ ಬೀದಿಗಿಳಿದ ಪ್ರತಿಭಟನಕಾರರು ‘ ಮೋದಿ ಗೋ ಬ್ಯಾಕ್’ ಹಾಗೂ ‘ಡೌನ್ ವಿದ್ ಬಿಜೆಪಿ’ ಎಂಬ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದರು. ಎಸ್‌ ಪ್ಲಾನೆಡ್ ಪ್ರದೇಶದಲ್ಲಿ ರಾತ್ರಿಯಿಡೀ ಧರಣಿ ಮುಂದುವರಿಸಿದ ಅವರು, ಪ್ರಧಾನಿ ನಗರದಿಂದ ನಿರ್ಗಮಿಸುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದರು..

‘‘ ತಾರತಮ್ಯದಿಂದ ಕೂಡಿದ ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವವರ ಧ್ವನಿಯನ್ನು ಅದುಮಲು ಸಾಧ್ಯವಿಲ್ಲ’’ ಎಂದು ಯಚೂರಿ ಟ್ವೀಟ್ ಮಾಡಿದ್ದಾರೆ.

 ‘‘ಪ್ರಧಾನಿಯವರು ಸಂಪರ್ಕಕ್ಕೆ ಸಿಗುತ್ತಿಲ್ಲ ಹಾಗೂ ಹೇಗಾದರೂ ಮಾಡಿ ಪ್ರತಿಭಟನೆಯನ್ನು ಕೊನೆಗಾಣಿಸಬಹುದೆಂದು ಅವರು ಭಾವಿಸಿದ್ದಾರೆ. ಆದರೆ ಅವರಿಗೆ ಅದು ಸಾಧ್ಯವಿಲ್ಲ. ಭಾರತದ ಯುವಜನತೆ ಮುಂದೆ ಬಂದಿದ್ದಾರೆ ಹಾಗೂ ಅವರು ಈ ದೇಶವನ್ನು ಮುನ್ನಡೆಸಲಿದ್ದಾರೆ’’’ ಎಂದು ಯಚೂರಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News