ಹೋಮ, ಕೀರ್ತನೆ, ಕುರ್ ಆನ್ ಪಠಣ: ಏಕತೆಗೆ ವೇದಿಕೆಯಾದ ಸಿಎಎ ಪ್ರತಿಭಟನೆ

Update: 2020-01-12 16:59 GMT

ಹೊಸದಿಲ್ಲಿ, ಜ.12: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿರುವ ದಿಲ್ಲಿಯ ಶಾಹೀನ್‌ಭಾಗ್‌ನಲ್ಲಿ ರವಿವಾರ ‘ಸರ್ವಧರ್ಮ ಸಂಭವ’ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ವೈವಿಧ್ಯತೆಯಲ್ಲಿ ಏಕತೆ ಎಂಬ ಆಶಯದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಹಿಂದು ಸಂಪ್ರದಾಯದಂತೆ ಹೋಮ, ಹವನ, ಸಿಖ್ ಸಮುದಾಯದವರ ಕೀರ್ತನೆ ಹಾಗೂ ಮುಸ್ಲಿಮರು ಕುರ್ ಆನ್ ಪಠಿಸಿದರು. ಜೊತೆಗೆ ಸಂವಿಧಾನದ ಪೀಠಿಕೆಯನ್ನು ಪಠಿಸಿ, ಸಂವಿಧಾನದ ಸಮಾಜವಾದಿ ಮತ್ತು ಜಾತ್ಯಾತೀತ ವೌಲ್ಯಗಳನ್ನು ರಕ್ಷಿಸಲು ಬದ್ಧ ಎಂಬ ಪ್ರಮಾಣವಚನ ಸ್ವೀಕರಿಸಲಾಯಿತು.

ಭಗವದ್ಗೀತೆ, ಬೈಬಲ್ ಮತ್ತು ಕುರ್ ಆನ್‌ನ ಉಕ್ತಿಗಳನ್ನು ಪಠಿಸಲಾಯಿತು. ಬಳಿಕ ಸಂವಿಧಾನದ ಪೀಠಿಕೆಯನ್ನು ವಾಚಿಸಲಾಗಿದೆ ಎಂದು ಪ್ರತಿಭಟನೆಯ ಸಂಘಟಕರಲ್ಲಿ ಒಬ್ಬರಾದ ತಸೀರ್ ಅಹ್ಮದ್ ಹೇಳಿದ್ದಾರೆ.

ಧರ್ಮಗಳ ಮಧ್ಯೆ ಸೌಹಾರ್ದ, ವಿಶ್ವಾಸ ಬೆಳೆಸುವ ಉದ್ದೇಶದಿಂದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಮಹಾತ್ಮಾ ಗಾಂಧೀಜಿ ‘ಸರ್ವಧರ್ಮ ಸಂಭವ’ ಎಂಬ ಪರಿಕಲ್ಪನೆಯನ್ನು ಆರಂಭಿಸಿದ್ದರು. ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರು ಹಾಗೂ ಮಕ್ಕಳ ಸಹಿತ ನೂರಾರು ಪ್ರತಿಭಟನಾಕಾರರು ಪಾಲ್ಗೊಂಡಿದ್ದರು. ಪೌರತ್ವ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಎನ್‌ಆರ್‌ಸಿ ಪ್ರಕ್ರಿಯೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಡಿಸೆಂಬರ್ 16ರಂದು ಶಾಹೀನ್‌ಭಾಗ್‌ನ ಸರಿತಾ ವಿಹಾರ್ ರಸ್ತೆಯಲ್ಲಿ 44 ವರ್ಷದ ಝೈನುಲ್ ಅಬಿದಿನ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. 15 ದಿನದ ಬಳಿಕ ಇವರಿಗೆ 40 ವರ್ಷದ ಮೆಹರುನ್ನೀಸಾ ಜತೆಯಾಗಿದ್ದರು.

 ಇಲ್ಲಿ ಪ್ರತಿಭಟನೆ ಆರಂಭದ ಮೊದಲನೇ ದಿನದಿಂದಲೇ ಮೂವರು ಹಿರಿಯ ಮಹಿಳೆಯರು ಮುಷ್ಕರದಲ್ಲಿ ಪಾಲ್ಗೊಂಡು ‘ಶಾಹೀನ್‌ಭಾಗ್‌ನ ದಬಾಂಗ್ ದೀದಿಯರು’ ಎಂಬ ಹೆಸರಿನಲ್ಲಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News