×
Ad

‘ಮಾತು ಕಡಿಮೆ, ಕೆಲಸ ಹೆಚ್ಚು ಮಾಡಿ’: ಜ.ನರವಾಣೆಗೆ ಅಧೀರ್‌ ರಂಜನ್ ಕಿವಿಮಾತು

Update: 2020-01-12 22:11 IST

ಹೊಸದಿಲ್ಲಿ,ಜ.12: ಕೇಂದ್ರ ಸರಕಾರ ಆದೇಶ ನೀಡಿದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ)ದ ಮೇಲೆ ದಾಳಿ ನಡೆಸಲು ಸೇನೆ ಸಿದ್ಧವಿರುವುದಾಗಿ ಭೂಸೇನಾ ವರಿಷ್ಠ ಮನೋಜ್ ಮುಕುಂದ್ ನರವಾಣೆ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್‌ ರಂಜನ್ ಚೌಧರಿ, ಸೇನಾವರಿಷ್ಠ ‘ಮಾತು ಕಡಿಮೆ ಮಾಡಿ, ಕೆಲಸ ಹೆಚ್ಚು ಮಾಡಲಿ’ ಎಂದು ಕಟಕಿಯಾಡಿದ್ದಾರೆ.

ಈ ಬಗ್ಗೆ ಇಂದು ಟ್ವೀಟ್ ಮಾಡಿರುವ ಅವರು ಜಮ್ಮುಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹಾಗೂ ಪಾಕ್ ಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದಿಂದ ಹಿಂದೆ ಸರಿಯಬೇಕೆಂದು 1994ರಲ್ಲಿ ಲೋಕಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾದ ನಿರ್ಣಯವನ್ನು ಪ್ರಸ್ತಾವಿಸಿದ್ದಾರೆ. ‘‘ಒಂದು ವೇಳೆ ಜನರಲ್ ನರವಾಣೆ ಅವರು ಪಿಓಕೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸಬೇಕೆಂದಿದ್ದರೆ ಅವರು ತ್ರಿಪಡೆಗಳ ಸೇನಾವರಿಷ್ಠ ಜ.ಬಿಪಿನ್ ರಾವತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೊತೆ ಸಮಾಲೋಚನೆ ನಡೆಸಬೇಕು’’ ಎಂದು ಚೌಧರಿ ಟ್ವೀಟಿಸಿದ್ದಾರೆ.

  ಸೇನಾವರಿಷ್ಠರಾಗಿ ಅಧಿಕಾರವಹಿಸಿಕೊಂಡ ಬಳಿಕ ಎನ್‌ಡಿಟಿವಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಜನರಲ್ ನರವಾಣೆ ಅವರು, ಪಾಕ್‌ಆಕ್ರಮಿತ ಕಾಶ್ಮೀರದ ಲ್ಲಿ ಸೇನಾ ಕಾರ್ಯಾಚರಣೆ ನಡೆಸುವ ಬಗ್ಗೆ ಸೇನೆಯು ವಿವಿಧ ಯೋಜನೆಗಳನ್ನು ಹೊಂದಿದೆ ಎಂದು ಹೇಳಿದ್ದರು.ಈ ಯೋಜನೆಗಳಲ್ಲಿ ಪಿಓಕೆಯಲ್ಲಿ ಸೇನಾ ಕಾರ್ಯಾಚರಣೆ ನಡೆಸುವುದು ಕೂಡಾ ಒಳಗೊಂಡಿದೆಯೇ ಎಂಬ ಪ್ರಶ್ನೆಗೆ ಅವರು ಆ ಬಗ್ಗೆ  ಆದೇಶ ದೊರೆತಲ್ಲಿ ಅದಕ್ಕೂ ಸೇನೆ ಸಿದ್ಧವಾಗಿದೆ ಎಂದಿದ್ದರು.

ಜನರಲ್ ನರವಾಣೆ ಅವರು ಸೇನಾವರಿಷ್ಠರಾಗಿ ನೇಮಕಗೊಂಡಾಗಿನಿಂದ ಪಾಕಿಸ್ತಾನದ ಬಗ್ಗೆ ಕಠಿಣವಾದ ಹೇಳಿಕೆಳನ್ನು ನೀಡುತ್ತಾ ಬಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News