ಕಲಾ ಸೇವೆಯ ಗುರುತು ಚಿರಾಯುವಾಗಿರಲಿ: ಎಂ.ಎಲ್.ಸಾಮಗ
ಉಡುಪಿ, ಜ.12: ಕಲಾಸೇವೆಯಲ್ಲಿ ನಿಸ್ವಾರ್ಥವಾಗಿ ತೊಡಗಿಸಿಕೊಂಡವ ರನ್ನು ಸದಾ ನೆನೆಯುವುದು ಕಲಾರಾಧಕರ ಆದ್ಯ ಕರ್ತವ್ಯ. ಒಬ್ಬ ಕಲಾವಿದ ಮರೆಯಾದರೂ ಅವನ ಕಲಾಸೇವೆಯ ಗುರುತು ಚಿರಾಯುವಾಗಿರಬೇಕು ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್.ಸಾಮಗ ಹೇಳಿದ್ದಾರೆ.
ಸುಮನಸಾ ಕೊಡವೂರು ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಉಡುಪಿ ಎಂ.ಜಿ.ಎಂ. ಕಾಲೇಜಿನ ರವೀಂದ್ರ ಮಂಟಪದಲ್ಲಿ ಇತ್ತೀಚೆಗೆ ಆಯೋಜಿಸಲಾದ ರಂಗೋಪಾಸಕರಾದ ದಿ.ಕೆ.ಬಿ.ರಾವ್ ಹಾಗೂ ಅಗ್ರಹಾರ ಭಾಸ್ಕರ್ ಭಟ್ ಅವರಿಗೆ ಶ್ರದ್ಧಾಂಜಲಿ ಅರ್ಪಣಾ ಸಮಾರಂಭದಲ್ಲಿ ಅವರು ನುಡಿನಮನ ಸಲ್ಲಿಸಿದರು.
ಈ ಸಂಧರ್ಭದಲ್ಲಿ ದಿ.ಕೆ.ಬಿ.ರಾವ್ ಅವರ ಸಹೋದರ ಉಮೇಶ್ ರಾವ್, ದಿ.ಭಾಸ್ಕರ್ ಭಟ್ ಅವರ ಸೊಸೆ ಪೂರ್ಣಿಮ ಜನಾರ್ದನ್ ಉಪಸ್ಥಿತರಿದ್ದರು. ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು ಸ್ವಾಗತಿಸಿದರು. ಗೌರವಾಧ್ಯಕ್ಷ ಎಂ.ಎಸ್.ಭಟ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಬಳಿಕ ಸುಮನಸಾ ಸದಸ್ಯರಿಂದ ಪುಟುಗೋಸಿ ಮನುಷ್ಯ ನಾಟಕ ಪ್ರದರ್ಶನಗೊಂಡಿತು.