ಕೃಷ್ಣಾಪುರ: ಸಿಎಎ ವಿರುದ್ಧ ಬೃಹತ್ ಪ್ರತಿಭಟನಾ ಸಮಾವೇಶ
ಮಂಗಳೂರು, ಜ.12: ಕೇಂದ್ರ ಸರಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ‘ಸಂವಿಧಾನ ಉಳಿಸಿ ದೇಶ ರಕ್ಷಿಸಿ’ ಬೃಹತ್ ಪ್ರತಿಭಟನಾ ಸಮಾವೇಶವು ನಗರದ ಹೊರವಲಯದ ಕೃಷ್ಣಾಪುರ ಪ್ಯಾರಡೇಸ್ ಮೈದಾನದಲ್ಲಿ ರವಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ಮೊಯ್ದಿನ್ ಬಾವ, ಸರ್ವ ಧರ್ಮ ಮನೋಭಾವದ ಸಂದೇಶವನ್ನು ನೀಡಿದ ಸಂವಿಧಾನದ ಆಶಯಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಿರುಚುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನ್ಯಾಯಂಗ ತನಿಖೆಗೆ ಒತ್ತಾಯ: ಡಿವೈಎಫ್‌ಸಿ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಪೌರತ್ವ ಕಾಯ್ದೆ ವಿರುದ್ಧ ಮುಂದಿನ ದಿನಗಳಲ್ಲಿ ದೇಶದ ಸರ್ವ ನಾಗರಿಕರ ಹೋರಾಟ ಮಾಡುವ ಅಗತ್ಯತೆ ಇದೆ. ಸಂವಿಧಾನದ ಆಶಯಗಳನ್ನು ತಿರುಚುವ ವಿರುದ್ಧ ಹೋರಾಟ ಅನಿವಾರ್ಯ ಎಂದು ಹೇಳಿದರು.
ಪೌರತ್ವ ಕಾಯ್ದೆಯ ದುಷ್ಪರಿಣಾಮ ಕೇವಲ ಒಂದು ಸಮುದಾಯ ಹಾಗೂ ಪಕ್ಷಕ್ಕೆ ಮೀಸಲು ಅಲ್ಲ; ಎಲ್ಲರಿಗೂ ಅದು ಅನ್ವಯವಾಗುತ್ತದೆ. ಡಿ.19ರಂದು ಮಂಗಳೂರಿನಲ್ಲಿ ನಡೆದ ಪೊಲೀಸ್ ದೌರ್ಜನ್ಯವನ್ನು ಖಂಡನೀಯ. ಘಟನೆಗೆ ರಾಜ್ಯ ಸರಕಾರವೇ ನೈತಿಕ ಹೊಣೆ ಹೊರಬೇಕು. ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರನ್ನು ಅಮಾನತು ಮಾಡಿ ಪ್ರಕರಣದ ನೈಜತೆಗಾಗಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ಸಾಮಾಜಿಕ ಹೋರಾಟಗಾರ, ಲೇಖಕ ಬಿ.ಆರ್. ಭಾಸ್ಕರ್ ಮಾತನಾಡಿ, ಎನ್‌ಆರ್‌ಸಿ ಯಿಂದ ಮುಸ್ಲಿಮರಿಗೆ ತೊಂದರೆ ಆಗುವುದಕ್ಕಿಂತ ಮುಸ್ಲಿಮೇತರರಿಗೇ ಹೆಚ್ಚು ತೊಂದರೆ ಆಗಲಿದೆ. ಅಶ್ವತ್ಥ್ ನಾರಾಯಣ ಅವರನ್ನು ‘ಅಸ್ವಸ್ಥ ನಾರಾಯಣ’ ಎಂದು ಕರೆಯುತ್ತೇನೆ ಎಂದರು.
‘ಹೋಲ್‌ಸೆಲ್ ಕೊಲೆಗಾರ’ ಗುಜರಾತ್‌ನಲ್ಲಿ ರಕ್ತದೋಕುಳಿ ನಡೆಸಿದ ವ್ಯಕ್ತಿ ಪ್ರಧಾನಿ ಆಗಿದ್ದಾರೆ. ‘ರಿಟೇಲ್ ಕೊಲೆಗಾರ’ ಗೃಹಮಂತ್ರಿಯಾಗಿದ್ದಾರೆ. ‘ಕೋತಿ ಆಡ್ಸೋನ್’ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿದ್ದಾನೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಹಿರಿಯ ಪತ್ರಕರ್ತ ಶಶಿಧರ್ ಭಟ್ ಮಾತನಾಡಿ, ರಕ್ತಾಪಾತಿಗಳು, ವಿಭಜಕರು, ಕೋಮುವಾದ ನಡೆಸುವವರು ಬಲಿಷ್ಠರಾಗುತ್ತಿ ದ್ದಾರೆ. ಈ ದೇಶ ಉಳಿಯಬೇಕಾದರೆ ಹಿಂದೂ ಮತ್ತು ಮುಸ್ಲಿಂ ರ ಸೌಹರ್ದತೆಯಲ್ಲಿ ಇರಬೇಕಾಗಿದೆ. ಜಿಲ್ಲೆ ಕೋಮು ಸೌಹರ್ದತೆಗೆ ಹೆಸರಾಗುತ್ತಿದೆ. ಪೊಲೀಸರ ಕೈ ತುರಿಸಲು ಪ್ರಾರಂಭವಾದಾಗ ಲಾಠಿಚಾರ್ಜ್, ಪಿಸ್ತೂಲಿನ ಗುಂಡೇಟು ತಿನ್ನಬೇಕು. ಮೋಶಾ (ನರೇಂದ್ರ ಮೋದಿ, ಅಮಿತ್ ಶಾ) ಮೋಸದ ಮೂಲಕ ದೇಶದ ಸೌಹರ್ದತೆಯನ್ನು ಇಬ್ಭಾಗ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ರವರ ಗುಪ್ತ ಅಜೆಂಡಾ ಹಿಂದೂ ರಾಷ್ಟ್ರದ ನಿರ್ಮಾಣವಾಗಿದೆ. ಸಿಎಎ ವಿರುದ್ಧ ಕೇವಲ ಮುಸ್ಲಿಮರು ಮಾತ್ರವಲ್ಲ ದಲಿತರು, ಶೂದ್ರರು ಧ್ವನಿ ಎತ್ತಬೇಕು, ವಿರೋಧಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಮಾತನಾಡಿದರು. ಪ್ರತಿಭಟನಾ ಸಮಾವೇಶದ ಅಧ್ಯಕ್ಷತೆಯನ್ನು ಅಶ್ರಫ್ ಬದ್ರಿಯಾ ವಹಿಸಿದ್ದರು.
ಸಭೆಯಲ್ಲಿ ಬಿ.ಎಂ. ಮಮ್ತಾಝ್ ಅಲಿ, ಅಬೂಬಕರ್ ಕುಳಾಯಿ, ‘ಸನ್ಮಾರ್ಗ’ ವಾರಪತ್ರಿಕೆ ಪ್ರಧಾನ ಸಂಪಾದಕ ಎ.ಕೆ.ಕುಕ್ಕಿಲ, ಕೃಷ್ಣಾಪುರ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಉಮರುಲ್ ಫಾರೂಕ್ ಸಖಾಫಿ, ಚೊಕ್ಕಬೆಟ್ಟು ಮುಹಿಯುದ್ದೀನ್ ಜುಮಾ ಮಸೀದಿ ಧರ್ಮಗುರು ಅಝೀಝ್ ದಾರಿಮಿ, ಮಂಗಳೂರು ಎಸ್‌ಕೆಎಸ್‌ಎಂ ದಾವಾ ಸೆಂಟರ್ ಅಧ್ಯಕ್ಷ ಎಂ.ಜಿ. ಮುಹಮ್ಮದ್, ಪಿಎಫ್‌ಐನ ಎ.ಕೆ. ಅಶ್ರಫ್ ಜೋಕಟ್ಟೆ, ದಲಿತ ಚಳವಳಿಗಾರ ಅಶೋಕ ಕೊಂಚಾಡಿ, ಮನಪಾ ಮಾಜಿ ಮೇಯರ್ ಕೆ.ಅಶ್ರಫ್, ಇಫ್ತಿಕಾರ್ ಅಹ್ಮದ್, ಡಿವೈಎಫೈ ಪ್ರಮುಖರಾದ ಇಮ್ತಿಯಾಝ್, ಮಾಜಿ ಮನಪಾ ಸದಸ್ಯ ಬಶೀರ್ ಅಹ್ಮದ್, ಎಸ್‌ಡಿಪಿಐ ಮುಖಂಡರಾದ ಜಲೀಲ್ ಕೃಷ್ಣಾಪುರ, ಕಮಾಲ್ ಚೊಕ್ಕಬೆಟ್ಟು ಮತ್ತಿತ್ತರು ಉಪಸ್ಥಿತರಿದ್ದರು.