ತೈವಾನ್ ಅಧ್ಯಕ್ಷೆಯಾಗಿ ತ್ಸಾಯಿ ಇಂಗ್-ವೆನ್ ಪುನರಾಯ್ಕೆ
Update: 2020-01-12 23:42 IST
ತೈಪೆ (ತೈವಾನ್), ಜ. 12: ತೈವಾನ್‌ನಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್ ಪುನರಾಯ್ಕೆಯಾಗಿದ್ದಾರೆ ಹಾಗೂ ಚೀನಾದ ಬೆದರಿಕೆಗಳಿಗೆ ತಾನು ಮಣಿಯುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾವು, ತೈವಾನ್ ತನಗೆ ಸೇರಿದೆ ಎಂಬ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ರವಿವಾರ ಹೇಳಿದೆ.
ಚುನಾವಣಾ ಪ್ರಚಾರದ ವೇಳೆ, ‘ಒಂದು ದೇಶ, ಎರಡು ವ್ಯವಸ್ಥೆಗಳು’ ಮಾದರಿಯಲ್ಲಿ ಚೀನಾದ ಆಡಳಿತವನ್ನು ತೈವಾನ್ ಜನತೆ ಒಪ್ಪಿಕೊಳ್ಳುವಂತೆ ಮಾಡಲು ಗರಿಷ್ಠ ಪ್ರಯತ್ನಗಳನ್ನು ಮಾಡಿತ್ತು.
‘‘ತೈವಾನ್‌ನ ಆಂತರಿಕ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾದರೂ, ಜಗತ್ತಿನಲ್ಲಿ ಇರುವುದು ಒಂದೇ ಚೀನಾ ಹಾಗೂ ತೈವಾನ್ ಚೀನಾದ ಭಾಗ ಎಂಬ ಮೂಲ ವಿಷಯದಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ’’ ಎಂದು ಚೀನಾದ ವಿದೇಶ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.
ತೈವಾನ್ ಶನಿವಾರ ಅಧ್ಯಕ್ಷೆ ತ್ಸಾಯಿ ಇಂಗ್-ವೆನ್‌ರನ್ನು ಭಾರೀ ಬಹುಮತದಿಂದ ಪುನರಾಯ್ಕೆ ಮಾಡಿದೆ.