'ಸುಳ್ಳು ಸುದ್ದಿ' ಪ್ರಸಾರ ಮಾಡಿದ ಆರೋಪ: ನ್ಯಾಯಾಲಯದ ಕ್ಷಮೆ ಕೇಳಿ ಖುಲಾಸೆಯಾದ ರಾಜದೀಪ್ ಸರ್ದೇಸಾಯಿ

Update: 2020-01-13 09:59 GMT
Photo: facebook/rajdeepsardesai

ಹೊಸದಿಲ್ಲಿ: ಸೊಹ್ರಾಬುದ್ದೀನ್ ಶೇಖ್ ಎನ್‍ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿ 'ತಪ್ಪಾದ' ವರದಿ ಪ್ರಕಟಿಸಿದ್ದಕ್ಕೆ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಹಾಗೂ ಇತರರು ಬೇಷರತ್ ಕ್ಷಮೆಯಾಚಿಸಿದ ನಂತರ ಹೈದರಾಬಾದ್ ನ್ಯಾಯಾಲಯ ಅವರನ್ನು ನವೆಂಬರ್ 2019ರಂದು ಈ ಸಂಬಂಧಿತ ಪ್ರಕರಣದಲ್ಲಿ ಖುಲಾಸೆಗೊಳಿಸಿತ್ತೆಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. `ಬೇಷರತ್ ಕ್ಷಮೆಯಾಚಿಸಿ' ನವೆಂಬರ್ 27ರಂದು ಸರ್ದೇಸಾಯಿ ಅವರು ಅಫಿಡವಿಟ್ ಸಲ್ಲಿಸಿದ್ದರು.

Bar and Bench,  LiveLaw ಇವುಗಳು ಈ ಪ್ರಕರಣದಲ್ಲಿ ಸರ್ದೇಸಾಯಿ ಸಲ್ಲಿಸಿದ್ದ ಕ್ಷಮೆ ಹಾಗೂ ಮುಂದೆ ಅವರ ಖುಲಾಸೆ ಕುರಿತ ಮಾಹಿತಿ ಪ್ರಕಟಿಸಿವೆ.

ವಿಶೇಷ ತನಿಖಾ ತಂಡದ ಭಾಗವಾಗಿದ್ದ ಐಪಿಎಸ್ ಅಧಿಕಾರಿ ರಾಜೀವ್ ತ್ರಿವೇದಿ ನಕಲಿ ನಂಬರ್ ಪ್ಲೇಟುಗಳಿದ್ದ ಕಾರುಗಳನ್ನು ಒದಗಿಸಿದ್ದರು ಹಾಗೂ ಈ ಕಾರುಗಳನ್ನು ಬಳಸಿ ಅಹ್ಮದಾಬಾದ್‍ ಗೆ ಸೊಹ್ರಾಬುದ್ದೀನ್‍ ನನ್ನು ಕರೆತಂದು `ನಕಲಿ' ಎನ್‍ಕೌಂಟರ್‍ನಲ್ಲಿ ಹತ್ಯೆಗೈಯ್ಯಲಾಗಿತ್ತು ಎಂದು ಮೇ 2007ರಲ್ಲಿ ಆಗ ಸಿಎನ್‍ಎನ್-ಐಬಿಎನ್‍ ನಲ್ಲಿದ್ದ ಸರ್ದೇಸಾಯಿ ತಮ್ಮ ವರದಿಯೊಂದರಲ್ಲಿ   ತಿಳಿಸಿದ್ದರು.

 ಆಗಿನ ಆಂಧ್ರ ಸರಕಾರ ಸರ್ದೇಸಾಯಿ ಹಾಗೂ ಸಿಎನ್‍ಎನ್-ಐಬಿಎನ್‍ ನ 10 ಮಂದಿ ವರದಿಗಾರರ ವಿರುದ್ಧ ಪ್ರಕರಣ ದಾಖಲಿಸಿತ್ತು.  ಈ ವರದಿಯು ತ್ರಿವೇದಿಯ ಅವರ ಮಾನಿಹಾನಿಗೈದಿದೆ ಹಾಗೂ ಅದು ಸುಳ್ಳು ವರದಿ ಎಂದು ಸರಕಾರ ಹೈಕೋರ್ಟಿಗೆ ಹೇಳಿತ್ತು.

ಆರೋಪಿಗಳು ತಮ್ಮ ವಿರುದ್ಧದ ಪ್ರಕರಣ ಕೈಬಿಡುವಂತೆ ಅಪೀಲು ಸಲ್ಲಿಸಿದ್ದರೂ ಅದನ್ನು ಎಪ್ರಿಲ್ 2011ರಲ್ಲಿ ರದ್ದುಪಡಿಸಲಾಗಿತ್ತು. ಇದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಆದರೆ ಮೇ 2015ರಲ್ಲಿ ಇದನ್ನೂ ರದ್ದುಗೊಳಿಸಲಾಗಿತ್ತು. ವಿಚಾರಣೆಯನ್ನು ನೊಯ್ಡಾಗೆ ವರ್ಗಾಯಿಸುವ ಅಪೀಲನ್ನೂ ತಿರಸ್ಕರಿಸಲಾಗಿತ್ತು.

ಕಳೆದ ವರ್ಷದ ನವೆಂಬರ್ 27ರಲ್ಲಿ ಸರ್ದೇಸಾಯಿ  ಅವರು ಹೈದರಾಬಾದ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿ `ತ್ರಿವೇದಿ ಕುರಿತು ಸುಳ್ಳು ಸುದ್ದಿ ಪ್ರಕಟವಾಗಿತ್ತು ಹಾಗೂ ನಕಲಿ ನಂಬರ್ ಪ್ಲೇಟ್ ಸಂಬಂಧಿತ ಆರೋಪ ದೃಢೀಕರಿಸಲು ಯಾವುದೇ ಪುರಾವೆಯಿರಲಿಲ್ಲ' ಎಂದಿದ್ದರು.  ಅವರ ಬೇಷರತ್ ಕ್ಷಮೆಯನ್ನು ದಾಖಲಿಸಿಕೊಂಡು ಅದೇ ದಿನ ಆರೋಪದಿಂದ ಖುಲಾಸೆಗೊಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News