ಪೌರತ್ವ ಕಾಯ್ದೆ ವಿರುದ್ಧ ಜನಜಾಗೃತಿ ಸಮಾವೇಶಕ್ಕೆ ಪುತ್ತೂರು ಭಾಗದಿಂದ 10 ಸಾವಿರ ಮಂದಿ: ನೂರುದ್ದೀನ್ ಸಾಲ್ಮರ

Update: 2020-01-13 10:42 GMT

ಪುತ್ತೂರು : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸಿಎಎ, ಎಂಪಿಆರ್ ಮತ್ತು ಎನ್ಆರ್ಸಿ ಕಾಯ್ದೆಗಳನ್ನು ವಿರೋಧಿಸಿ ಜ.15ರಂದು ಮಂಗಳೂರಿನ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದ್ದು, ಪುತ್ತೂರು ಭಾಗದಿಂದ 10ಸಾವಿರಕ್ಕೂ ಅಧಿಕ ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಕಾರ್ಯದರ್ಶಿ, ವಕೀಲ ನೂರುದ್ದೀನ್ ಸಾಲ್ಮರ ಅವರು ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿ ಜಿಲ್ಲೆಗಳ ಎಲ್ಲಾ ಜಮಾಅತ್ ಗಳನ್ನೊಳಗೊಂಡ ದ.ಕ.ಮತ್ತು ಉಡುಪಿ ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ 28 ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯುವ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಜ.15ರಂದು ಅಪರಾಹ್ನ 2.30ಕ್ಕೆ ಸಮಾವೇಶ ಆರಂಭಗೊಳ್ಳುವುದು. ಉಡುಪಿ ಖಾಝಿ ಅಲ್ಹಾಜ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸುವರು. ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರು ಅಧ್ಯಕ್ಷತೆ ವಹಿಸುವರು. ಮಂಗಳೂರಿನ ಖಾಝಿ ಶೈಖುನಾ ಅಲ್ಹಾಜ್ ತ್ವಾಕ ಮುಸ್ಲಿಯಾರ್ ಅವರು ದುಃವಾ ನೆರವೇರಿಸುವರು. ರಾಷ್ಟ್ರದ ಹಿತಚಿಂತಕರು,ಸಾಹಿತಿಗಳು,ಧಾರ್ಮಿಕ ಮುಖಂಡರುಗಳು, ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಸಮಾವೇಶದಲ್ಲಿ ಭಾಗವಹಿಸುವರು ಎಂದು ಅವರು ತಿಳಿಸಿದರು.

ಸಮಾವೇಶದಲ್ಲಿ ರಾಷ್ಟ್ರ ಗೀತೆ ಹಾಡಲು ಮತ್ತು ರಾಷ್ಟ್ರ ಧ್ವಜ ಬಳಸಲು ಮಾತ್ರ ಅವಕಾಶವಿರುತ್ತದೆ. ಯಾವುದೇ ಸಂಘಟನೆ, ಪಕ್ಷಗಳ ಧ್ವಜಗಳಾಗಲೀ, ಚಿಹ್ನೆಗಳನ್ನಾಗಲೀ ತರುವಂತಿಲ್ಲ, ಯಾವುದೇ ಸಂಘಟನೆಗಳ ಪರವಾಗಿ ಘೋಷಣೆ ಕೂಗಲು ಕೂಡ ಅವಕಾಶ ಇರುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪುತ್ತೂರು ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷ ಎಲ್.ಟಿ.ಅಬ್ದುಲ್ ರಝಾಕ್ ಹಾಜಿ, ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಸುಲೈಮಾನ್ , ಉಪ್ಪಿನಂಗಡಿ ನಾಗರಿಕ ಹಿತರಕ್ಷಣಾ ವೇದಿಕೆಯ ಸಂಚಾಲಕ ಅಬ್ದುಲ್ ರಹಿಮಾನ್ ಯುನಿಕ್, ಎಸ್ವೈಎಸ್ ಸಂಘಟನೆಯ ಪುತ್ತೂರು ಜಿಲ್ಲೆಯ ಕಾರ್ಯದರ್ಶಿ ಇಕ್ಬಾಲ್ ಬಪ್ಪಳಿಗೆ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News