×
Ad

ಜಿಎಸ್‌ಟಿಯಲ್ಲಿ ಹೊಸ ಬದಲಾವಣೆ ಕುರಿತ ವಿಚಾರಗೋಷ್ಠಿ

Update: 2020-01-13 19:27 IST

ಉಡುಪಿ, ಜ.13: ಜಿಎಸ್‌ಟಿ ರಿಟರ್ನ್ಸ್‌ನಲ್ಲಿ ಸಹಜ, ಸರಳ, ಸುಗಮ ಎಂಬ ಪ್ರಾಯೋಗಿಕ ಆವೃತ್ತಿಯ ಹೊಸ ನಮೂನೆಗಳು 2020ರ ಎ.1ರಿಂದ ಜಾರಿಗೆ ಬರಲಿದ್ದು, ಇದರಲ್ಲಿ ಪ್ರತಿ ತಿಂಗಳು ರಿಟರ್ನ್ಸ್ ಸಲ್ಲಿಸಬೇಕಾಗುತ್ತದೆ ಎಂದು ಮಂಗಳೂರಿನ ವಾಣಿಜ್ಯ ತೆರಿಗೆಗಳ ಜಂಟಿ ಆಯುಕ್ತೆ ಮೀರಾ ಸುರೇಶ್ ಪಂಡಿತ್ ಹೇಳಿದ್ದಾರೆ.

ಭಾರತೀಯ ಲೆಕ್ಕ ಪರಿಶೋಧನಾ ಸಂಸ್ಥೆ ಇದರ ಎಸ್‌ಐಆರ್‌ಸಿ ಉಡುಪಿ ಶಾಖೆ ವತಿಯಿಂದ ಕಡಿಯಾಳಿಯ ಐಸಿಎಐ ಭವನದಲ್ಲಿ ಸೋಮವಾರ ಆಯೋಜಿಸಲಾದ ಜಿಎಸ್‌ಟಿಯಲ್ಲಿ ಇತ್ತೀಚಿನ ನವೀಕರಣಗಳು ಮತ್ತು ಹೊಸ ಬದಲಾವಣೆಗೆ ಸಿದ್ಧತೆ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಎಸ್‌ಟಿ ಟ್ರೈಯಲ್ ಆಫ್ ಎನ್‌ಎನ್‌ಎಕ್ಸ್ ಒಂದು ಮತ್ತು ಎರಡರಲ್ಲಿ ಕರ್ನಾಟಕ ರಾಜ್ಯ ಇಡೀ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. 5ಕೋಟಿ ರೂ. ಒಳಗೆ ವ್ಯವಹಾರ ನಡೆಸುವವರು ಮೂರು ತಿಂಗಳಿಗೊಮ್ಮೆ ಮತ್ತು 5ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ಮಾಡುವವರು ಪ್ರತಿ ತಿಂಗಳು ರಿಟರ್ನ್ಸ್ ಸಲ್ಲಿಸ ಬೇಕಾಗುತ್ತದೆ. ಮಂಗಳೂರು ವಿಭಾಗವು ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ 2018-19ಕ್ಕೆ ಹೋಲಿಸಿದರೆ ಶೇ.2.52ರಷ್ಟು ಹಿನ್ನಡೆ ಕಂಡಿದೆ ಎಂದರು.

ಕೇಂದ್ರ ತೆರಿಗೆ ಉಡುಪಿ ವಿಭಾಗದ ಸಹಾಯಕ ಆಯುಕ್ತ ಡಾ.ತಂಡಾಲೆ ಕಿಶೋರ್ ಮಾತನಾಡಿ, ತೆರಿಗೆದಾರರು ಮತ್ತು ಸರಕಾರದ ನಡುವೆ ಅನುಕೂಲ ಮಾಡಿಕೊಡುವುದು ಜಿಎಸ್ಟಿ ಉದ್ದೇಶವಾಗಿದೆ. ಎರಡೂವರೆ ವರ್ಷಗಳಲ್ಲಿ ಹಂತ ಹಂತವಾಗಿ ಜಿಎಸ್‌ಟಿ ಕುರಿತ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ. ತೆರಿಗೆ ದಾರರಿಗೆ ಉತ್ತಮ ಮಾರ್ಗದರ್ಶನ ಮಾಡುವುದರಿಂದ ಸರಕಾರಕ್ಕೆ ಲಾಭ ವಾಗುತ್ತದೆ ಎಂದು ಹೇಳಿದರು.

ಸಂಘದ ಉಡುಪಿ ಶಾಖೆ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಮಾತನಾಡಿ, ನಿಧಾನಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಯ ಮಧ್ಯೆಯೂ 2019ರ ಡಿಸೆಂಬರ್ ತಿಂಗಳಲ್ಲಿ 1,03,164ಕೋಟಿ ರೂ. ಜಿಎಸ್‌ಟಿ ಸಂಗ್ರಹ ಮಾಡ ಲಾಗಿದ್ದು, ಇದು 2018ರ ಡಿಸೆಂಬರ್‌ಗೆ ಹೋಲಿಸಿದರೆ ಶೇ.16 ಹೆಚ್ಚಳವಾಗಿದೆ. ಕಳೆದ 5 ತಿಂಗಳಲ್ಲಿ ತಲಾ ಒಂದು ಲಕ್ಷ ಕೋಟಿ ರೂ.ಗಳಿಗೂ ಅಧಿಕ ಜಿಎಸ್‌ಟಿ ಸಂಗ್ರಹವಾಗಿದೆ ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬೆಂಗಳೂರಿನ ಸಿಎ ಜತಿನ್ ಅನಿಲ್ ಕ್ರಿಸ್ಟೋಫರ್ ಉಪಸ್ಥಿತರಿದ್ದರು. ಸ್ವಾಗತಿಸಿದರು. ಸಿಎ ಅರ್ಚನಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News