ಇಂಗ್ಲಿಷ್ ಮಾಧ್ಯಮದ ಬದಲು ಭಾಷೆಯನ್ನಾಗಿ ಕಲಿಸಲು ಚಿಂತನೆ: ಸುರೇಶ್ ಕುಮಾರ್
ಉಡುಪಿ, ಜ.13: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಹೊಸ ಶಿಕ್ಷಣ ನೀತಿಯಲ್ಲಿ ಆಯಾ ರಾಜ್ಯದ ಮಾತೃ ಭಾಷೆಗಳಲ್ಲಿಯೇ ಶಿಕ್ಷಣ ನೀಡು ವುದು ಅಗತ್ಯ ಎಂದು ಹೇಳಲಾಗಿದೆ. ಇದರ ಮೊದಲ ಹೆಜ್ಜೆಯಾಗಿ ನಾವು ಇಂಗ್ಲಿಷ್‌ನ್ನು ಮಾಧ್ಯಮದ ಬದಲು ಒಂದು ಭಾಷೆಯನ್ನಾಗಿ ಕಲಿಸಬೇಕೆಂಬ ಯೋಜನೆ ಹಾಕಿಕೊಂಡಿದ್ದೇವೆ. ಮಕ್ಕಳು ಉತ್ತಮ ಇಂಗ್ಲಿಷ್ ಮತ್ತು ಕನ್ನಡ ಭಾಷೆಯನ್ನು ಕಲಿಯಬೇಕಾಗಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಉಡುಪಿ ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ಆಯಾ ರಾಜ್ಯದ ಮಾತೃಭಾಷೆಯಲ್ಲಿ ಕಲಿತರೆ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲು ಸಾಧ್ಯ ಎಂಬ ಅಭಿಪ್ರಾಯ ಇದೆ. ಈ ಹಿಂದಿನ ರಾಜ್ಯ ಸರಕಾರ ಕನ್ನಡ ಕಡ್ಡಾಯ ಕಾಯಿದೆ ಜಾರಿಗೆ ತಂದರೂ ಅದು ಸುಪ್ರೀಂ ಕೋರ್ಟ್‌ನಲ್ಲಿ ಬಿದ್ದು ಹೋಯಿತು. ಈಗಾಗಲೇ ಆರಂಭಿಸಿರುವ ಇಂಗ್ಲಿಷ್ ಮಾಧ್ಯಮ ಶಾಲೆ ಗಳನ್ನು ರದ್ದುಗೊಳಿಸಿ ಕನ್ನಡ ಮಾಧ್ಯಮ ಶಾಲೆ ಮಾಡುವಂತೆ ಕೆಲವರು ಸಿಎಂಗೆ ತಾಕೀತು ಮಾಡಿದ್ದಾರೆ. ಹೀಗೆ ಶಿಕ್ಷಣ ವಿಚಾರದಲ್ಲಿ ಧ್ವಂದ್ವ ಪರಿಸ್ಥಿತಿ ನಿರ್ಮಾಣ ವಾಗಿದೆ ಎಂದರು.
ಆಧುನಿಕ ವರ್ಣಾಶ್ರಮ: ಒಂದೊಂದು ವರ್ಗದವರಿಗೆ ಒಂದೊಂದು ರೀತಿಯ ಶಿಕ್ಷಣವನ್ನು ನೀಡುವ ಮೂಲಕ ಶಾಲೆಗಳಲ್ಲಿಯೂ ಆಧುನಿಕ ವರ್ಣಾಶ್ರಮವನ್ನು ಆಚರಿಸಲಾಗುತ್ತಿದೆ. ಈ ವಿಚಾರದಲ್ಲಿ ಏಕರೂಪ ಶಿಕ್ಷಣ ನೀತಿ ಜಾರಿಗೆ ತರುವ ಬಗ್ಗೆ ಕೂಡ ಸಾಕಷ್ಟು ವಿಚಾರ ಬೇಧಗಳಿವೆ. ಕೇವಲ ಇಂಗ್ಲಿಷ್ ಇಲ್ಲ ಎಂಬ ಕಾರಣಕ್ಕಾಗಿ ಸರಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ ಎಂಬ ವಾದ ಸರಿಯಲ್ಲ. ಅದಕ್ಕೆ ಬೇರೆ ಬೇರೆ ಕಾರಣಗಳು ಕೂಡ ಇವೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಸರಕಾರ ಈಗ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸ ಬೇಕೆಂಬ ಉದ್ದೇಶವನ್ನು ಹೊಂದಿದೆ. ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಲು ಬೆಂಗಳೂರಿನಲ್ಲಿ ತುಂಬಾ ಜನ ಕಾಯುತ್ತಿರುವುದರಿಂದ ಅದನ್ನು ಯಾವ ರೀತಿ ಮಾಡಬೇಕೆಂಬ ಬಗ್ಗೆ ಯೋಚನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರೇಶ್ ನಾಯಕ್ ಸ್ವಾಗತಿಸಿದರು. ಕುತ್ಯಾರ್ ನವೀನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಶಾಲಾವಧಿಯಲ್ಲಿ ಮೊಬೈಲ್ ಬಳಕೆ ನಿಷೇಧ
ಪಕ್ಕೆಲುಬು ವಿಡಿಯೋ ಪ್ರಕರಣದ ಹಿನ್ನೆಲೆಯಲ್ಲಿ ಶಾಲಾ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಬಳಕೆ ಮಾಡಬಾರದು ಎಂಬುದಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರುಗಳ ಮೂಲಕ ಎಲ್ಲ ಶಾಲೆಗಳಿಗೂ ಸುತ್ತೋಲೆ ಹೊರಡಿಸಲಾಗಿದೆ. ಮಕ್ಕಳ ನೂನ್ಯತೆ ಮತ್ತು ಕೊರತೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಅಕ್ಷಮ್ಯ ಅಪರಾಧ. ಈ ಕುರಿತು ಶಿಕ್ಷಕರುಗಳಿಗೆ ಸೂಚನೆ ಮತ್ತು ಎಚ್ಚರಿಕೆಯನ್ನು ನೀಡಲಾಗಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ಈ ವಿಡಿಯೋ ಮಾಡಿರುವ ಶಿಕ್ಷಕನನ್ನು ಅಮಾನತುಗೊಳಿಸಿರುವ ಬಗ್ಗೆ ಉಳಿದ ಎಲ್ಲ ಕಡೆ ಪ್ರಶಂಸೆ ವ್ಯಕ್ತಪಡಿಸಿದರೆ, ಆ ಗ್ರಾಮಸ್ಥರು ಮಾತ್ರ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಶಿಕ್ಷಕರ ಅಮಾನತು ಆದೇಶ ವಾಪಾಸ್ಸು ಪಡೆಯದಿದ್ದರೆ ಶಾಲೆ ತೆರೆಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಧರಣಿ ನಡೆಸುತ್ತಿದ್ದಾರೆ. ಇದೊಂದು ವಿಚಿತ್ರ ಸನ್ನಿವೇಶ ಆಗಿದೆ ಎಂದು ಅವರು ಹೇಳಿದರು.