ಇರಾನ್ ಪರಿಸ್ಥಿತಿಯ ಬಗ್ಗೆ ಫೇಸ್‌ಬುಕ್‌ನಲ್ಲಿ ವ್ಯಂಗ್ಯ: ಭಾರತೀಯ-ಅಮೆರಿಕನ್ ಪ್ರೊಫೆಸರ್ ವಜಾ

Update: 2020-01-13 15:05 GMT

ನ್ಯೂಯಾರ್ಕ್, ಜ. 13: ಇರಾನ್ ಪರಿಸ್ಥಿತಿಯ ಬಗ್ಗೆ ಫೇಸ್‌ ಬುಕ್‌ನಲ್ಲಿ ಹಾಸ್ಯ ತುಣುಕೊಂದನ್ನು ಹಾಕಿದ್ದ ಭಾರತೀಯ-ಅಮೆರಿಕನ್ ಪ್ರೊಫೆಸರ್ ಒಬ್ಬರನ್ನು ಅವರ ಕಾಲೇಜು ವಜಾಗೊಳಿಸಿದೆ.

‘‘ಅಶೀನ್ ಫಾನ್ಸೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಅವರ ವೈಯಕ್ತಿಕ ಫೇಸ್‌ಬುಕ್ ಪುಟದಲ್ಲಿ ಪ್ರಕಟಗೊಂಡಿರುವ ಹಾಸ್ಯ ತುಣುಕು ಕಾಲೇಜಿನ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಬಿಂಬಿಸುವುದಿಲ್ಲ’’ ಎಂದು ಬಾಬ್ಸನ್ ಕಾಲೇಜು ಹೇಳಿದೆ ಎಂದು ಡಬ್ಲ್ಯುಬಿಝಡ್ ಟೆಲಿವಿಶನ್ ತಿಳಿಸಿದೆ.

ಇರಾನ್‌ನ ಮಹತ್ವದ ಹಾಗೂ ಇರಾನ್ ಸಂಸ್ಕೃತಿಯನ್ನು ಪ್ರತಿನಿಧಿಸುವ ಅತ್ಯಂತ ಮಹತ್ವದ 52 ಸ್ಥಳಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಅಶೀನ್ ಫಾನ್ಸೆ ಈ ಹಾಸ್ಯ ತುಣುಕನ್ನು ಫೇಸ್‌ಬುಕ್‌ನಲ್ಲಿ ಹಾಕಿದ್ದರು.

 ಇದಕ್ಕೆ ಪ್ರತಿಕ್ರಿಯೆಯಾಗಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ ಫಾನ್ಸೆ, ಇರಾನ್ ಕೂಡ ಬಾಂಬ್ ಹಾಕಲು ಮಿನಸೊಟದಲ್ಲಿರುವ ಮಾಲ್ ಆಫ್ ಅಮೆರಿಕ ಅಥವಾ ಕಾರ್ದಾಶಿಯನ್ (ಅಮೆರಿಕದ ಸಿನೇಮಾ ಹಾಗೂ ಟಿವಿ ನಟಿ) ಕುಟುಂಬದ ಮನೆ ಮುಂತಾದ ಅಮೆರಿಕದ 52 ಮಹತ್ವದ ಸ್ಥಳಗಳನ್ನು ಆರಿಸಬೇಕು ಎಂದು ಹೇಳಿದ್ದರು.

‘‘ನಾವು ಎಲ್ಲ ರೀತಿಯ ಬೆದರಿಕೆ ಮಾತುಗಳು ಮತ್ತು ಹಿಂಸೆ ಅಥವಾ ದ್ವೇಷವನ್ನು ಮನ್ನಿಸುವ ಹಿಂಸೆಯನ್ನು ಖಂಡಿಸುತ್ತೇವೆ’’ ಎಂದು ಕಾಲೇಜು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News