ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ದಲಿತ ಸೇವಾ ಸಮಿತಿ ಪ್ರತಿಭಟನೆ

Update: 2020-01-13 15:10 GMT

ಪುತ್ತೂರು: ಡಿಸಿ ಮನ್ನಾ ಭೂಮಿಯನ್ನು ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಗಳಿಗೆ ಹಂಚುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ದಲಿತ ಸೇವಾ ಸಮಿತಿ ವತಿಯಿಂದ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿರುವ ಅಮರ್‍ಜವಾನ್ ಜ್ಯೋತಿ ಬಳಿಯಲ್ಲಿ ಪ್ರತಿಭಟನೆ ನಡೆಸಿ, ಶಾಸಕರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ದಲಿತ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಅವರು ಸರ್ಕಾರ ಮತ್ತು ಸರ್ಕಾರದ ಅಧೀನ ಇಲಾಖೆಯಲ್ಲಿ ದುಡಿಯುತ್ತಿರುವ ಡಿ ಗ್ರೂಪ್ ನೌಕರರಿಗೆ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದ್ದು ಎಲ್ಲರಿಗೂ ಸಮಾನ 
ವೇತನ ನೀಡಬೇಕು. ಡಿಸಿ ಮನ್ನಾ ಜಾಗವನ್ನು ಅರ್ಹ ಎಸ್‍ಸಿ ಮತ್ತು ಎಸ್‍ಟಿ ಕುಟುಂಬಗಳಿಗೆ ಹಂಚುವ ಕೆಲಸ ಪ್ರತಿ ಗ್ರಾಮ ಪಂಚಾಯತ್‍ಗಳಲ್ಲಿ ನಡೆಯಬೇಕು. ಪುತ್ತೂರು ನಗರದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಿಸುವ ಕೆಲಸ ಶೀಘ್ರವೇ ಆಗಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವುದು. ಕಾಲೊನಿಗಳಿಗೆ ಸಮರ್ಪಕವಾದ ರಸ್ತೆಯನ್ನು ಮಾಡುವುದು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಈಗಾಗಲೇ ಬಂಟ್ವಾಳದಲ್ಲಿ ಪ್ರತಿಭಟನೆಯನ್ನು ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಿ ಆಯಾ ಕ್ಷೇತ್ರದ ಶಾಸಕರುಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಗುವುದು ಎಂದರು.

ಬೇಡಿಕೆ ಮನವಿಯನ್ನು ಮಂಡಿಸಿದ ದಲಿತ ಸೇವಾ ಸಮಿತಿ ಉಪಾಧ್ಯಕ್ಷ ಮನೋಹರ್ ಕೋಡಿಜಾಲು ಅವರು ತಾಲೂಕಿನ 14 ಬೇಡಿಕೆಗಳನ್ನು ಮುಂದಿರಿಸಿ ಶಾಸಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. 

ಪ್ರತಿಭಟನೆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಶಾಸಕ ಸಂಜೀವ ಮಠಂದೂರು ಅವರು ಬೇಡಿಕೆಯ ಬಗ್ಗೆ ಮನವಿ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು ಬೇಡಿಕೆಗಳನ್ನು ತನ್ನ ಇತಿ ಮಿತಿಯಲ್ಲಿ ಪರಿಹರಿಸುವ ಪ್ರಯತ್ನ ನಡೆಸುತ್ತೇನೆ. ಕೆಲವೊಂದು ಬೇಡಿಕೆಗಳು ಸರ್ಕಾರದ ಹಂತದಲ್ಲಿಯೇ ನಡೆಯಬೇಕಾಗಿದೆ. ಈ ಬಗ್ಗೆಯೂ ಸಂಬಂಧಿಸಿದ ಮಂತ್ರಿಗಳು ಹಾಗೂ ಮುಖ್ಯ ಮಂತ್ರಿಯ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನ ನಡೆಸುತ್ತೇನೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗಾಗಿ ವಿಶೇಷ ಅಧ್ಯತೆ ನೀಡಿ ಬೇಡಿಕೆಗಳನ್ನು ಹಂತ ಹಂತವಾಗಿ ಪರಿರಹಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ದಲಿತ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು, ಜಿಲ್ಲಾ ಸಮಿತಿ ಉಪಾಧ್ಯಕ್ಷ ರಾಜು ಹೊಸ್ಮಠ, ತಾಲೂಕು ಪ್ರಧಾನ ಕಾರ್ಯದರ್ಶಿ ಸಂಕಪ್ಪ ನಿಡ್ಪಳ್ಳಿ, ಗೌರವ ಅಧ್ಯಕ್ಷ ತನಿಯ ಒಳತ್ತಡ್ಕ, ಸಂಚಾಲಕ ಕೃಷ್ಣಪ್ಪ ನಾಯ್ಕ್ ಆಯಾಪು, ಉಪಾಧ್ಯಕ್ಷ ಆನಂದ ಕೌಡಿಚ್ಚಾರು, ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಸುನಂದ ತೆಂಕಿಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News