×
Ad

ಸರಕಾರಿ ಎಲ್‌ಕೆಜಿ ಯುಕೆಜಿಯಿಂದ ಅಂಗನವಾಡಿಗೆ ತೊಂದರೆ ಆಗಲ್ಲ : ಸಚಿವ ಸುರೇಶ್ ಕುಮಾರ್

Update: 2020-01-13 20:46 IST

ಉಡುಪಿ, ಜ.13: ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸು ವುದರಿಂದ ಅಂಗನವಾಡಿ ಕೇಂದ್ರಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಂಗನವಾಡಿ ನೌಕರರ ಕೆಲಸ ಪೌಷ್ಠಿಕಾಂಶದ ಆಹಾರ ಕೊಡುವುದಾದರೆ, ಎಲ್‌ಕೆಜಿ ಯುಕೆಜಿ ಕೆಲಸ ಶಿಕ್ಷಣ ನೀಡುವುದಾಗಿದೆ ಎಂದು ರಾಜ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಗನವಾಡಿ ನೌಕರರಿಗೆ ಮಕ್ಕಳಿಗೆ ಶಿಕ್ಷಣ ನೀಡುವುದು ಬಿಟ್ಟು ನೂರೆಂಟು ಕೆಲಸಗಳನ್ನು ಕೊಡಲಾಗುತ್ತದೆ. ಹೀಗಾಗಿ ಅವರ ಕೆಲಸಕ್ಕೆ ಯಾವುದೇ ತೊಂದರೆ ಆಗಲ್ಲ. ನಾವು ಎಲ್‌ಕೆಜಿ ಯುಕೆಜಿ ಆರಂಭಿಸದಿದ್ದರೆ ಸರಕಾರಿ ಶಾಲೆಗಳಿಗೆ ಮಕ್ಕಳೇ ಬರುವುದಿಲ್ಲ. ಇದು ನಮಗೆ ಒಂದು ಮಕ್ಕಳನ್ನು ಆಕರ್ಷಿಸುವ ಏರಿಯಾ ಕೂಡ ಆಗುತ್ತದೆ ಎಂದು ತಿಳಿಸಿದರು.

ನಮ್ಮ ಶಾಲೆಗಳಿಗೆ ಬೇಕಾಗಿರುವುದು ಮೂರು ವರ್ಷ ವಯಸ್ಸಿಗಿಂತ ಮೇಲಿನ ಮಕ್ಕಳು. ಹೊಸ ಶಿಕ್ಷಣ ನೀತಿಯಲ್ಲೂ ಮೂರು ವರ್ಷದಿಂದ ಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಹೇಳಲಾಗುತ್ತದೆ ಎಂದ ಅವರು, ಈ ಕುರಿತು ಅಂಗನವಾಡಿ ನೌಕರರ ಆತಂಕ ದೂರ ಮಾಡುವ ನಿಟ್ಟಿನಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಗಳು ಶಿಕ್ಷಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯವರ ಸಭೆಯನ್ನು ಕರೆದಿದ್ದಾರೆ ಎಂದರು.

ಒಂದನೆ ತರಗತಿಯಿಂದ ನೀಡುವ ನಲಿಕಲಿ ಪಾಠವನ್ನು ಎಲ್‌ಕೆಜಿ ಯುಕೆಜಿ ಯಲ್ಲೂ ಆರಂಭಿಸಲು ತರಬೇತಿ ಪಡೆದ ಶಿಕ್ಷಕರ ಅಗತ್ಯವಿದೆ. ಆ ರೀತಿ ತರಬೇತಿ ಯನ್ನು ಅಂಗನವಾಡಿ ನೌಕರರಿಗೆ ನೀಡಲು ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆಯಲ್ಲಿ ಸಾಧ್ಯವೇ ಎಂಬುದರ ಬಗ್ಗೆ ಈ ಸಭೆಯಲ್ಲಿ ಚರ್ಚೆ ಮಾಡ ಲಾಗುವುದು ಎಂದು ಸಚಿವರು ಹೇಳಿದರು.

ಸರಕಾರಿ ಶಾಲೆಗಳ ಸಬಲೀಕರಣ

ಶಾಲಾ ಕಟ್ಟಡಗಳು ಮತ್ತು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸುವ ಮೂಲಕ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ. ಅದೇ ರೀತಿ ಇಡೀ ದೇಶದಲ್ಲಿ ಮೆಚ್ಚುಗೆ ಗಳಿಸಿರುವ ನಲಿಕಲಿಯ ಗುಣಮಟ್ಟವನ್ನು ಕೂಡ ಇನ್ನಷ್ಟು ಹೆಚ್ಚಿಸಲು ಉದ್ದೇಶಿಸಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳನ್ನು ಹೆಚ್ಚಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

ಈಗಾಗಲೇ ಆರಂಭಿಸಲಾಗಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಕನ್ನಡ ಶಾಲೆಯನ್ನಾಗಿಸಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿವೆ. ಆ ಬಗ್ಗೆ ಯಾವುದೇ ತೀರ್ಮಾನ ಆಗಿಲ್ಲ. ಈ ಕುರಿತು ಅಂತಿಮ ತೀರ್ಮಾನವನ್ನು ಮುಖ್ಯಮಂತ್ರಿ ಹಾಗೂ ಸರಕಾರ ತೆಗೆದುಕೊಳ್ಳಲಿದೆ. ರಾಜ್ಯದ ವಿವಿಧ ಭಾಗಗಳ ಶಾಸಕರು ನಮಗೆ ಹೆಚ್ಚು ಶಾಲೆಗಳು ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಅದರ ಬಗ್ಗೆಯೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News