ಆರೂರು ಗ್ರಾಪಂ: 16ಕ್ಕೆ ತ್ರೈಮಾಸಿಕ ಕೆಡಿಪಿ ಸಭೆ
ಉಡುಪಿ, ಜ.13: ಆರೂರು ಗ್ರಾಪಂನ ತೃತೀಯ ಹಂತದ ತ್ರೈಮಾಸಿಕ ಕೆಡಿಪಿ ಸಭೆಯು ಜ.16ರಂದು ಅಪರಾಹ್ನ 2:30ಕ್ಕೆ ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲರ ಅಧ್ಯಕ್ಷತೆಯಲ್ಲಿ ಆರೂರು ಪಂಚಾಯತ್ ಸಭಾಭವನದಲ್ಲಿ ನೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಶೇಷ ಗ್ರಾಮಸಭೆ: ಗ್ರಾಮ ನೀರು ಮತ್ತು ನೈರ್ಮಲ್ಯ ಇಲಾಖೆ ಪಂಚಾಯತ್ ರಾಜ್ ಉಡುಪಿ ಮತ್ತು ಆರೂರು ಗ್ರಾಪಂಗಳ ಸಹಯೋಗದಲ್ಲಿ ನೀರಿನ ಬಳಕೆದಾರರಿಗಾಗಿ ವಿಶೇಷ ಗ್ರಾಮ ಸಭೆ ಗ್ರಾಪಂ ಅಧ್ಯಕ್ಷ ರಾಜೀವ ಕುಲಾಲರ ಅಧ್ಯಕ್ಷತೆಯಲ್ಲಿ, ಆರೂರು ಗ್ರಾಪಂ ಸಭಾಂಗಣ ದಲ್ಲಿ ಜರಗಿತು.
ಅಧ್ಯಕ್ಷ ರಾಜೀವ್ ಕುಲಾಲ್ ಮಾತನಾಡಿ, ಆರೂರು ಗ್ರಾಪಂ ಈಗ 327 ಮನೆಗಳಿಗೆ ಶುದ್ದ ಕುಡಿಯುವ ನೀರನ್ನು ಪೂರೈಸುತ್ತಿದ್ದು, ನೀರಿನ ಸರಬರಾಜು ವ್ಯವಸ್ಥೆಯಲ್ಲಿ ಆಗುವ ತೊಡಕುಗಳು ಮತ್ತು ಅವುಗಳ ಪರಿಹಾರಕ್ಕೆ ತೆಗೆದು ಕೊಳ್ಳುವ ತುರ್ತು ಕ್ರಮಗಳ ಬಗ್ಗೆ ಗ್ರಾುಸ್ಥರಿಗೆ ತಿಳಿಸಿದರು.
ನೀರು ಅತ್ಯಮೂಲ್ಯ ವಸ್ತುವಾಗಿದ್ದು, ನೀರಿನ ಬಳಕೆ ಹಿತಮಿತವಾಗಿರಲಿ. ನೀರನ್ನು ಉಳಿತಾಯ ಮಾಡುವ ಕ್ರಮಗಳಾದ ಮಳೆ ನೀರು ಕೊಯ್ಲುಗಳನ್ನು ಅಳವಡಿಸಿಕೊಂಡು ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಗ್ರಾಮ್ಥರಿಗೆ ಅಧ್ಯಕ್ಷರು ಕರೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ತಾಪಂ ಸದಸ್ಯೆ ನಳಿನಿ ಪ್ರದೀಪರಾವ್ ಮಾತನಾಡಿ, ನೀರು ಜೀವನದ ಪ್ರತಿ ಹಂತದಲ್ಲಿ ಅವಶ್ಯಕವಾಗಿದ್ದು, ಜಾಗ್ರತೆಯಿಂದ ವ್ಯಯ ಮಾಡಿ ನೀರಿನ ಉಳಿತಾಯ ಮಾಡುವಂತೆ ತಿಳಿಸಿದರು.ಪಂ.ರಾಜ್ ಸಂಪನ್ಮೂಲ ವ್ಯಕ್ತಿ ಸೀತಾರಾಮ ಹೆಬ್ಬಾರ್, ನೀರಿನ ಉಳಿತಾಯದ ಮಾಹಿತಿ ಕಾರ್ಯಗಾರ ನಡೆಸಿ ನೀರಿನ ಮಹತ್ವ ಮತ್ತು ಸದ್ಬಳಕೆ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಗಣೇಶ ಕುಲಾಲ, ಸದಸ್ಯರಾದ ಮಾಲಿನಿ ಶೆಟ್ಟಿ, ನಾಗರತ್ನ ಜೆ ಆಚಾರ್ಯ, ಮನೋಜ ನಾಯ್ಕಿ ಮತ್ತು ನೀರಿನ ಬಳಕೆದಾರರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಜಾತ ಲಕ್ಕಪ್ಪನವರ ಸ್ವಾಗತಿಸಿ, ಯುವಜನ ಮತ್ತು ಅಭಿವೃದ್ಧಿ ಸಂಸ್ಥೆಯ ಆಶಾ ವಂದಿಸಿದರು.