ಮೋದಿ, ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರೆ ಜೀವಂತ ಹೂಳುತ್ತೇವೆ: ಬಿಜೆಪಿ ಮುಖಂಡನ ಧಮಕಿ

Update: 2020-01-13 16:26 GMT

ಲಕ್ನೊ, ಜ.13: ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗುವವರನ್ನು ಜೀವಂತ ಸಮಾಧಿ ಮಾಡುವುದಾಗಿ ಬಿಜೆಪಿ ಮುಖಂಡ ರಘುರಾಜ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಪೌರತ್ವ ಕಾಯ್ದೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆಲಿಗಢದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಘುರಾಜ್ ಸಿಂಗ್ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಈ ಬೆರಳೆಣಿಕೆಯಷ್ಟಿರುವ, ಹೆಚ್ಚೆಂದರೆ 1%ದಷ್ಟಿರುವ ಕ್ರಿಮಿನಲ್ ಮತ್ತು ಭ್ರಷ್ಟ ಜನರು ಪ್ರಧಾನಿ ಮೋದಿ ಮತ್ತು ಆದಿತ್ಯನಾಥ್ ವಿರುದ್ಧ ಮುರ್ದಾಬಾದ್ ಘೋಷಣೆ ಕೂಗುತ್ತಿದ್ದು, ಅವರನ್ನು ಜೀವಂತ ಸಮಾಧಿ ಮಾಡಲಾಗುವುದು ಎಂದು ಸಿಂಗ್ ಎಚ್ಚರಿಕೆ ನೀಡಿದ್ದಾರೆ.

ಇಂತಹ ಘಟನೆಗಳಿಂದ ಮೋದಿ ಮತ್ತು ಆದಿತ್ಯನಾಥ್‌ರನ್ನು ಗಲಿಬಿಲಿಗೊಳಿಸಲು ಸಾಧ್ಯವಿಲ್ಲ. ಇವರಿಬ್ಬರು ಇದೇ ರೀತಿ ದೇಶದಲ್ಲಿ ಆಡಳಿತ ನಡೆಸಲಿದ್ದಾರೆ. ದಾವೂದ್ ಇಬ್ರಾಹಿಂನಿಂದ ಹಣ ಪಡೆದು ನಮ್ಮ ಅಧಿಕಾರಿಗಳಿಗೆ ತೊಂದರೆ ಕೊಡುವವರನ್ನು ಹಾಗೂ ಮುಸ್ಲಿಮರನ್ನು ಚೆನ್ನಾಗಿ ಥಳಿಸಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಪೌರತ್ವ ಕಾಯ್ದೆಯನ್ನು ವಿರೋಧಿಸಿ ಇತ್ತೀಚೆಗೆ ಆಲಿಗಢ ಮುಸ್ಲಿಂ ವಿವಿಯ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯನ್ನು ಉಲ್ಲೇಖಿಸಿ ಸಿಂಗ್ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ. ರಘುರಾಜ್ ಸಿಂಗ್ ಹೇಳಿಕೆಯ ಬಗ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ, ಸಿಂಗ್ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಸಿಂಗ್ ಬಿಜೆಪಿಯ ಶಾಸಕನೂ ಅಲ್ಲ, ಅಥವಾ ಸಚಿವನಲ್ಲ. ಅವರ ಹೇಳಿಕೆಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News