ರತನ್ ಟಾಟಾ ವಿರುದ್ಧದ ಎಲ್ಲಾ ಮಾನನಷ್ಟ ಮೊಕದ್ದಮೆ ಹಿಂಪಡೆದ ನುಸ್ಲಿವಾಡಿಯಾ

Update: 2020-01-13 15:50 GMT

ಹೊಸದಿಲ್ಲಿ, ಜ.13: ಟಾಟಾ ಸಮೂಹ ಸಂಸ್ಥೆಗಳ ಅಧ್ಯಕ್ಷ ರತನ್ ಟಾಟಾರ ವಿರುದ್ಧದ 3000 ಕೋಟಿ ರೂ. ಮೊತ್ತದ ಮೊಕದ್ದಮೆಯೂ ಸೇರಿದಂತೆ ತಾನು ಸಲ್ಲಿಸಿರುವ ಎಲ್ಲಾ ಮಾನನಷ್ಟ ಮೊಕದ್ದಮೆಗಳನ್ನು ಹಿಂಪಡೆಯುವುದಾಗಿ ಬಾಂಬೆ ಡೈಯಿಂಗ್ ಅಧ್ಯಕ್ಷ ನುಸ್ಲಿವಾಡಿಯಾ ಹೇಳಿದ್ದಾರೆ.

 2016ರಲ್ಲಿ ಟಾಟಾ ಸಮೂಹದ ಕೆಲವು ಸಂಸ್ಥೆಗಳ ಆಡಳಿತ ಮಂಡಳಿಯ ನಿರ್ದೇಶಕ ಹುದ್ದೆಯಿಂದ ತನ್ನನ್ನು ಕೈಬಿಟ್ಟ ಬಳಿಕ ರತನ್ ಟಾಟಾ ಹಾಗೂ ಸಂಸ್ಥೆಯ ಇತರ ನಿರ್ದೇಶಕರ ವಿರುದ್ಧ ನುಸ್ಲಿವಾಡಿಯಾ 3,000 ಕೋಟಿ ರೂ. ಮೊತ್ತದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇಬ್ಬರೂ ಚರ್ಚಿಸಿ ಭಿನ್ನಾಭಿಪ್ರಾಯ ಇತ್ಯರ್ತಗೊಳಿಸುವಂತೆ 2019ರ ಜನವರಿ 6ರಂದು ಸುಪ್ರೀಂಕೋರ್ಟ್ ನುಸ್ಲಿವಾಡಿಯಾ ಹಾಗೂ ರತನ್ ಟಾಟಾರಿಗೆ ಸಲಹೆ ನೀಡಿತ್ತು. ಇದರಂತೆ, ನುಸ್ಲಿವಾಡಿಯಾರನ್ನು ಅವಮಾನಿಸುವ ಉದ್ದೇಶದಿಂದ ಅವರ ವಿರುದ್ಧ ಕ್ರಮ ಕೈಗೊಂಡಿರಲಿಲ್ಲ ಎಂದು ರತನ್ ಟಾಟಾ ಹೇಳಿಕೆ ನೀಡಿದ್ದರು.

ರತನ್ ಟಾಟಾ ಅವರ ಹೇಳಿಕೆಯನ್ನು ಗಮನಿಸಿ ಹಾಗೂ ನ್ಯಾಯಾಲಯದ ಅಭಿಪ್ರಾಯವೂ ಇದೇ ಆಗಿದ್ದ ಹಿನ್ನೆಲೆಯಲ್ಲಿ ನುಸ್ಲಿವಾಡಿಯಾ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ಹಿಂಪಡೆಯಲು ನ್ಯಾಯಪೀಠ ಅನುಮತಿ ನೀಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ತಿಳಿಸಿದೆ. ಅಲ್ಲದೆ ನ್ಯಾಯಾಲಯದ ಸಲಹೆಗೆ ಸೂಕ್ತವಾಗಿ ಸ್ಪಂದಿಸಿದ್ದಕ್ಕೆ ನುಸ್ಲಿವಾಡಿಯಾರನ್ನು ಅಭಿನಂದಿಸುವುದಾಗಿಯೂ ನ್ಯಾಯಪೀಠ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News