ಅದಮಾರು ಸ್ವಾಮೀಜಿಗೆ ಮಾಹೆಯಿಂದ ಅಭಿನಂದನೆ

Update: 2020-01-13 16:50 GMT

ಮಣಿಪಾಲ, ಜ.13: ಇದೇ ಶನಿವಾರ ಜ.18ರಂದು ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರಿಗೆ ಸೋಮವಾರ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ವತಿಯಿಂದ ಅಭಿನಂದಿಸಲಾಯಿತು.

 ಪ್ರತಿ ಎರಡು ವರ್ಷಗಳಿಗೊಮ್ಮೆ ಪರ್ಯಾಯ ಪೀಠಾರೋಹಣ ಮಾಡುವ ಸ್ವಾಮೀಜಿಗಳನ್ನು ಅಭಿನಂದಿಸುವ ಪರಿಪಾಟವನ್ನು ಮಾಹೆ ಹೊಂದಿದ್ದು, ಇದರಂತೆ ಇಂದು ಮಣಿಪಾಲಕ್ಕೆ ಆಗಮಿಸಿದ ಅದಮಾರು ಕಿರಿಯಶ್ರೀಗಳನ್ನು ವೇದಘೋಷದೊಂದಿಗೆ ಸ್ವಾಗತಿಸಲಾಯಿತು.
ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ಅವರು ಸ್ವಾಮೀಜಿ ಅವರನ್ನು ಸ್ವಾಗತಿಸಿದರೆ, ಡಾ.ಶ್ರೀನಿವಾಸ ಆಚಾರ್ಯ ಅವರು ಸ್ವಾಮೀಜಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.

ಮಾಹೆ ಟ್ರಸ್ಟ್‌ನ ಟ್ರಸ್ಟಿಗಳಾದ ವಸಂತಿ ಆರ್. ಪೈ ಅವರು ಸ್ವಾಮೀಜಿಗೆ ಫಲಪುಷ್ಪಗಳನ್ನು ಅರ್ಪಿಸಿದರೆ, ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಹಾಗೂ ಕುಲಪತಿ ಡಾ.ಎಚ್.ವಿನೋದ್ ಭಟ್ ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಸನ್ಮಾನಕ್ಕೆ ಉತ್ತರಿಸಿದ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ, ಜೀವನದಲ್ಲಿ ಏನಾದರೂ ವಿಶೇಷ ಸಾಧನೆ ಮಾಡಲು ಪ್ರತಿಯೊಬ್ಬರು ಕಠಿಣ ಪರಿಶ್ರಮ ಪಡಬೇಕು. ದೇವರ ಅನುಗ್ರಹಕ್ಕೆ ಕಠಿಣ ಪರಿಶ್ರಮದ ಅಗತ್ಯವಿದೆ. ಮಣಿಪಾಲ ಸಂಸ್ಥೆ ಕಳೆದ ಹಲವು ದಶಕಗಳಿಂದ ವಿದ್ಯಾದಾನದ ಮೂಲಕ ಸಮಾಜಕ್ಕೆ ಗಣನೀಯ ಸೇವೆ ಸಲ್ಲಿಸುತ್ತಿದೆ. ತಮ್ಮ ಪರ್ಯಾಯದ ಎರಡು ವರ್ಷಗಳ ಅವಧಿಯಲ್ಲಿ ಸನಾತನ ಧರ್ಮದ ಏಳಿಗೆಗೆ ಸಲಹೆ ಸೂಚನೆಗಳನ್ನು ನೀಡುವಂತೆ ತಿಳಿಸಿದರು.

ಪ್ರೊ ವೈಸ್ ಚಾನ್ಸಲರ್ ಡಾ.ಪಿ.ಎಲ್.ಎನ್.ಜಿ. ರಾವ್, ಜೆಮ್‌ಷೆದ್‌ಪುರದ ಮಣಿಪಾಲ-ಟಾಟಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಪೂರ್ಣಿಮಾ ಬಾಳಿಗಾ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News