ಸಾಮಾಜಿಕ ಜಾಲತಾಣದಲ್ಲಿ ದ.ಕ.ಜಿಲ್ಲಾ ಖಾಝಿ ವಿರುದ್ಧ ಅಪಪ್ರಚಾರ ಖಂಡನೀಯ : ಮೊಯಿದಿನಬ್ಬ ಹಾಜಿ

Update: 2020-01-13 17:23 GMT
ಮೊಯಿದಿನಬ್ಬ ಹಾಜಿ

ವಿಟ್ಲ, ಜ. 13: ದೇಶದ ಜನರು ಅಭದ್ರತೆ ಹಾಗೂ ಒಂದು ಸಮುದಾಯದಕ್ಕೆ ಸೀಮಿತವಾದ ಕರಾಳ ಕಾನೂನು ವಿರೋಧಿಸಿ ದೇಶದಾದ್ಯಂತ ಧರಣಿ, ಪ್ರತಿಭಟನೆಗಳು ನಡೆಯುತ್ತಿರುವ ಈ ಸನ್ನಿವೇಶದಲ್ಲಿ ಸಮಾಜ ವಿರೋಧಿಗಳು ಖಾಝಿ ಅವರ ನಿಂದನೆಯ ವೀಡಿಯೊ, ಆಡಿಯೋವನ್ನು ಹರಿಯಬಿಟ್ಟು ಅಪಪ್ರಚಾರದಲ್ಲಿ ತೊಡಗಿರುವುದು ಖಂಡನೀಯ ಎಂದು ದ.ಕ.ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಐ. ಮೊಯಿದಿನಬ್ಬ ಹಾಜಿ ಅವರು ತಿಳಿಸಿದ್ದಾರೆ.

ದ.ಕ. ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಎನ್ ಆರ್ ಸಿ, ಸಿಎಎ ಹಾಗೂ ಎನ್ ಪಿ ಆರ್ ಕಾಯ್ದೆಯಿಂದ ಸಮಸ್ಯೆ ಹಾಗೂ ಅದಕ್ಕಿರುವ ಪರಿಹಾರದ ಬಗ್ಗೆ  ಮಾಡಿದ ಸುದೀರ್ಘ ಭಾಷಣವನ್ನು ತಿರುಚಲಾಗಿದೆ. ಅದಲ್ಲದೆ,  ಒಂದು ನಿಮಿಷ ಕ್ಲಿಪ್ ಕಟ್ ಮಾಡಿ ಅದರ ಎರಡೂ ಬದಿಯೂ ಕಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ. ಇದು  ಐಕ್ಯತೆಯನ್ನು ಒಡೆಯುವ ಸಮಾಜ ದ್ರೋಹಿಗಳ ಕುತಂತ್ರ. ವೀಡಿಯೊ ಎಡಿಟ್ ಮಾಡಲು ಕಾದು ಕುಳಿತಿರುವ ಸಮಾಜ ದ್ರೋಹಿಗಳಿಗೆ ಸಮುದಾಯವನ್ನು ಒಡೆಯಬೇಕೆಂಬುವುದೇ ಮುಖ್ಯ ಉದ್ದೇಶ ಎಂದು ಅವರು ಪ್ರಕಟನೆಯಲ್ಲಿ ಆರೋಪಿಸಿದ್ದಾರೆ.

ಸಮುದಾಯದ ನಡುವೆ ಬೆಂಕಿ ಹಚ್ಚುವವರು ಮೊದಲು ಖಾಝಿ ಅವರ ಭಾಷಣವನ್ನು ಸಂಪೂರ್ಣ ಆಲಿಸಬೇಕಾಗಿದೆ. ಸಮುದಾಯವನ್ನು ಇಬ್ಭಾಗ ಮಾಡಲು ಬಯಸಿದ ಮಾನಸಿಕ ವ್ಯಕ್ತಿಗೆ ಈ ಸತ್ಯವೇನೂ ಬೇಕಿರಲಿಲ್ಲ, ಅರ್ಧಂಬರ್ಧ ಕಟ್ ಮಾಡಿ ತಮಗೆ ಬೇಕಿದ್ದ ಭಾಗದ ಎರಡೂ ಕಡೆಯೂ ಕತ್ತರಿಸಿ ಎಡಿಟ್ ಮಾಡಿ ಅದಕ್ಕೆ ತನ್ನ ಅಭಿಪ್ರಾಯವನ್ನೂ ಸೇರಿಸುತ್ತಾ ವೀಡಿಯೊ ಹರಿಯಬಿಟ್ಟಿರುವುದು ಸ್ಪಷ್ಟವಾಗಿಯೂ ಸಮುದಾಯವನ್ನು ಒಡೆಯುವ ತಂತ್ರವಲ್ಲದೇ ಇನ್ನೇನೂ ಇಲ್ಲ ಎಂದ ದ.ಕ.ಜಿಲ್ಲಾ ಮದ್ರಸ ಮೆನೇಜ್ಮೆಂಟ್ ಅಧ್ಯಕ್ಷ ಐ. ಮೊಯಿದಿನಬ್ಬ ಹಾಜಿ ಅವರು ಇಂತಹ ಅಪಪ್ರಚಾರಗಳಿಗೆ ಕಿವಿ ಕೊಡದಿರಿ ಎಂದು ಪ್ರಕಟನೆಯಲ್ಲಿ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News