ಮಾಣಿ : ದ್ವಿಚಕ್ರ ವಾಹನಗಳ ಮುಖಾಮುಖಿ ಢಿಕ್ಕಿ; ಸವಾರರಿಬ್ಬರು ಮೃತ್ಯು
ಬಂಟ್ವಾಳ, ಜ. 14: ದ್ವಿಚಕ್ರ ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟು, ಮತ್ತೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಾಣಿ ಮೈಸೂರು ಹೆದ್ದಾರಿಯ ಪೆರಾಜೆ ಮಠದ ತಿರುವಿನಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ.
ಕಲ್ಲಡ್ಕ ಶಾಲೆ ಬಳಿಯ ನಿವಾಸಿ ಕರೀಂ ಎಂಬವರ ಪುತ್ರ ಮುಹಮ್ಮದ್ ಅಜ್ಮಲ್ (19), ಮಾಣಿ ಬರೆನೆಕ್ಕರೆ ನಿವಾಸಿ ಮೋನಪ್ಪ ಪೂಜಾರಿ ಎಂಬವರ ಪುತ್ರ, ಪುತ್ತೂರು ಕಾಲೇಜು ವಿದ್ಯಾರ್ಥಿ ಪರೀಕ್ಷಿತ್ (19) ಮೃತರು ಎಂದು ಗುರುತಿಸಲಾಗಿದ್ದು, ಸ್ಥಳೀಯ ನಿವಾಸಿ, ಸಹಸವಾರ ಪದ್ಮನಾಭ ಗೌಡ (28) ಗಂಭೀರ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.
ಘಟನೆ
ಪರೀಕ್ಷಿತ್ ಹಾಗೂ ಪದ್ಮನಾಭ ಗೌಡ ಎಂಬವರು ಬೈಕ್ ನಲ್ಲಿ ಮಾಣಿ ಕಡೆಗೆ ತೆರಳಿದ್ದು, ಅಜ್ಮಲ್ ಅವರು ಆಕ್ಟೀವಾದಲ್ಲಿ ಕೊಡಾಜೆ ಕಡೆಗೆ ಹೋಗುತ್ತಿದ್ದಾಗ ಪೆರಾಜೆಯ ಮಠ ಎಂಬಲ್ಲಿನಾಯಿಯೊಂದು ಅಡ್ಡ ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನೆಯಿಂದ ದ್ವಿಚಕ್ರ ವಾಹನ ಸವಾರಿಬ್ಬರಿಗೂ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.