ಬಲ ಪ್ರಯೋಗದಿಂದ ಜನರ ಹೋರಾಟವನ್ನು ದಮನಿಸಲು ಸಾಧ್ಯವಿಲ್ಲ : ಇಲ್ಯಾಸ್ ಮುಹಮ್ಮದ್
ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‍ಆರ್ ಸಿ ಮೂಲಕ ಕೇಂದ್ರ ಬಿಜೆಪಿ ಸರಕಾರ ಹಾಗೂ ಅದರ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಕರ್ನಾಟಕದ ಬಿಜೆಪಿ ಸರಕಾರ ಜನಧ್ವನಿಯನ್ನು ಬಲಪ್ರಯೋಗದ ಮೂಲಕ ಹತ್ತಿಕ್ಕಲು ಹೊರಟಿದೆ. ಈಗಾಗಲೇ ಮಂಗಳೂರಿನಲ್ಲಿ ವಿನಾಕಾರಣ ಗೋಲಿಬಾರು ಹಾಗೂ ಲಾಠಿಚಾರ್ಜ್‍ಗಳ ಮೂಲಕ ಇಬ್ಬರ ಜೀವವನ್ನು ಬಲಿ ಪಡೆದುಕೊಂಡಿದೆ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ಪ್ರತಿಭಟನಾಕಾರರ ಮೇಲೆ ಕೇಸುಗಳನ್ನು ಜಡಿದು ಬಾಯಿಮುಚ್ಚಿಸುವ ವಿಫಲ ಪ್ರಯತ್ನಕ್ಕೆ ಇಳಿದಿದೆ. ಮೈಸೂರಿನಲ್ಲಿ ವಿದ್ಯಾರ್ಥಿನಿಯೋರ್ವರ ಹಾಗೂ ಇತರರ ಮೇಲೆ ದೇಶದ್ರೋಹದ ಪ್ರಕರಣವನ್ನು ದಾಖಲಿಸಿರುವುದನ್ನು ಖಂಡಿಸುವುದರೊಂದಿಗೆ ಇಂತಹ ಹತಾಶ ಪ್ರಯತ್ನಗಳು ಜನಶಕ್ತಿಯನ್ನು ದಮನಿಸಲು ಸಾಧ್ಯವಿಲ್ಲ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ಹೇಳಿದ್ದಾರೆ.
ಶಾಸಕ ಸೋಮಶೇಕರ್ ರೆಡ್ಡಿ ಹಾಗೂ ಸಚಿವ ಸಿ.ಟಿ ರವಿ ನೀಡುತ್ತಿರುವ ಹೇಳಿಕೆಗಳು ದ್ವೇಷ-ಹಿಂಸೆಯನ್ನು ಹುಟ್ಟುಹಾಕುವಂತದ್ದಾಗಿದ್ದು ರಾಜ್ಯದಲ್ಲಿ ಕಲಹಗಳಿಗೆ ಕರೆ ನೀಡುವಂತದ್ದಾಗಿದೆ. ಇಂತಹವರು ರಾಜ್ಯದ ಶಾಂತಿ, ನೆಮ್ಮದಿಗೆ ಮಾರಕರಾಗಿದ್ದಾರೆ. ನಿಜವಾಗಿಯೂ ದೇಶದ್ರೋಹದ ಕೇಸುಗಳನ್ನು ಸೋಮಶೇಕರ್ ರೆಡ್ಡಿ ಹಾಗೂ ಸಿ.ಟಿ ರವಿ ಯ ಮೇಲೆ ದಾಖಲಿಸಬೇಕಾಗಿತ್ತು. ಈ ನಡುವೆ ಪ.ಬಂಗಾಳದ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಉ.ಪ್ರದೇಶ ಬಿಜೆಪಿ ಮುಖಂಡ ರಘರಾಜ್ ಸಿಂಗ್ ಕೂಡಾ ಅತ್ಯಂತ ಕೀಳುಮಟ್ಟದ ಹೇಳಿಕೆಗಳನ್ನು ನೀಡಿ ಹತ್ಯಾಕಾಂಡಗಳಿಗೆ ಕರೆ ನೀಡಿರುವುದು ಕೂಡಾ 'ದೇಶದ್ರೋಹ'ವಾಗಿದ್ದು ಇಂತಹ ಅಸ್ವಸ್ಥ ಮನಸ್ಸುಗಳು ಇಂದು ಕಾನೂನಿನ ಭಯವಿಲ್ಲದೆ ಬಿಜೆಪಿ ಸರಕಾರದ ಅಭಯದೊಂದಿಗೆ ರಾಜಾರೋಷವಾಗಿ ಮೆರೆಯುತ್ತಿರುವುದು ದೇಶ ದುರಂತವಾಗಿದೆಂದು ಇಲ್ಯಾಸ್ ಮುಹಮ್ಮದ್ ತಿಳಿಸಿದ್ದಾರೆ.
ಕ್ರೈಸ್ತ ಸಮುದಾಯವನ್ನು ಮತ್ತು ಯೇಸುಕ್ರಿಸ್ತರನ್ನು ನಿಂದಿಸುವ ಕಲ್ಲಡ್ಕ ಪ್ರಭಾಕರ್ ಭಟ್ ಮುಂತಾದ ಬಿಜೆಪಿ ಆರೆಸ್ಸೆಸ್ ನಾಯಕರು ನಮ್ಮ ರಾಜ್ಯದ ಶಾಂತಿ, ಸಹಬಾಳ್ವೆ ಹಾಗೂ ಸೌಹಾರ್ದತೆಯನ್ನು ದ್ವಂಸಗೊಳಿಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ರಾಜ್ಯದ ಪೊಲೀಸರಿಗೆ ಹಾಗೂ ಸರಕಾರಗಳಿಗೆ ಇದು ಯಾಕೆ ಕಾಣುತ್ತಿಲ್ಲ?. ಪ್ರಭಾಕರ್ ಭಟ್ ಮೇಲೆ ಈ ಹಿಂದೆ ಹಲವು ಭಾರಿ ಇಂತಹದೇ ಪ್ರಕರಣಗಳು ದಾಖಲಾಗಿದ್ದರೂ ಬಿಜೆಪಿ ಸರಕಾರ ಹಾಗೂ ಪೊಲೀಸರ ಸಹಕಾರದಿಂದ ಪ್ರಕರಣಗಳು ಮೂಲೆ ಗುಂಪಾಗಿರುವುದು ಕೂಡಾ ಈ ರೀತಿಯ ಅನಾಗರಿಕ ಹೇಳಿಕೆಗಳಿಗೆ ಪ್ರೇರಣೆಯಾಗಿದೆ ಎಂಬುವುದನ್ನು ರಾಜ್ಯದ ಜನತೆ ಚೆನ್ನಾಗಿ ತಿಳಿದಿದ್ದಾರೆ ಎಂದು ಹೇಳಿದರು.
ಜನವಿರೋಧಿ ಕಾನೂನು ಹಾಗೂ ಸರಕಾರದ ಕ್ರಮಗಳ ವಿರುದ್ಧ ಹೋರಾಟ ನಡೆಸುವ ಜನರ ಮೇಲೆ ಕಾನೂನಿನ ದುರ್ಬಳಕೆ. ಪೊಲೀಸ್ ಬಲಪ್ರಯೋಗ, ಬೆದರಿಕೆ ಇತ್ಯಾದಿಗಳು ಜನಹೋರಾಟವನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಹಾಗೂ ಭಾರತದ ಭವಿಷ್ಯವನ್ನು ಧ್ವಂಸಗೊಳಿಸುವ ಶಕ್ತಿ ಸರಕಾರಗಳ ವಿರುದ್ಧ ಜನರ ಹೋರಾಟ ಯಶಸ್ವಿಯಾಗಲಿದೆ. ಇದು ಸಂವಿಧಾನವನ್ನು ಉಳಿಸುವ ಸ್ವಾತಂತ್ರ್ಯ ಸಂಗ್ರಾಮವಾಗಿದ್ದು ಮತ್ತೊಮ್ಮೆ ಈ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜಯವಾಗಲಿದೆ ಎಂದು ಇಲ್ಯಾಸ್ ಮುಹಮ್ಮದ್ ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.