×
Ad

ಸಂಘಪರಿವಾರ ಪ್ರತಿಭಟನೆಗೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ಸಿದ್ಧ: ಅಡ್ಪಂಗಾಯ

Update: 2020-01-15 13:42 IST

ಮಂಗಳೂರು, ಜ.15: ಕನಕಪುರದ ಕಪಾಲ ಬೆಟ್ಟದಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಸಂಘಟನೆಗಳಿಂದ ನಡೆದ ಪ್ರತಿಭಟನೆಗೆ ಪ್ರತಿತಂತ್ರ ರೂಪಿಸಿ ತಕ್ಕ ಉತ್ತರ ನೀಡಲಾಗುವುದು ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಧನಂಜಯ ಅಡ್ಪಂಗಾಯ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಬೆಳಗ್ಗೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ-ಆರೆಸ್ಸೆಸ್ಸಿನವರು ಜಿಲ್ಲೆಯಿಂದಲೂ ಅಪಾರ ಸಂಖ್ಯೆಯ ಜನರನ್ನು ಕರೆದು ಅಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ತಕ್ಕ ಉತ್ತರ ನೀಡಲು ಕಾಂಗ್ರೆಸ್ ತಯಾರಾಗಿದೆ ಎಂದು ತಿಳಿಸಿದರು.

ಕಪಾಲ ಬೆಟ್ಟ ವಿಚಾರವನ್ನು ಬಿಜೆಪಿಯವರು ಧರ್ಮಾಧಾರಿತವಾಗಿ ಕೊಂಡೊಯ್ದರೆ ನಾವು ರಾಜಕೀಯವಾಗಿ ಜನಬೆಂಬಲ ಕ್ರೋಡೀಕರಿಸಿ ಅವರ ತಂತ್ರಗಳನ್ನು ಎದುರಿಸಲಿದ್ದೇವೆ. ಪ್ರತಿಭಟನೆ ನಡೆಸುವುದು ಹಳೆ ಸ್ಟೈಲ್ ನಾವು ಯಾವ ರೀತಿ ಪ್ರತಿತಂತ್ರ ರೂಪಿಸಬೇಕು ಎನ್ನುವುದು ನಮ್ಮ ಮನಸ್ಸಿನಲ್ಲಿದೆ. ಅದೇ ತೆರನಾಗಿ ಮಾಡಲಿದ್ದೇವೆ ಎಂದು ಸ್ಪಷ್ಟಪಡಿಸಿರು.

ಬಿಜೆಪಿ-ಆರೆಸ್ಸೆಸ್ ಹುನ್ನಾರಕ್ಕೆ ಎಲ್ಲ ಜಾತಿ, ಧರ್ಮ, ಪಕ್ಷಾತೀತವಾಗಿ ಉತ್ತರ ನೀಡಬೇಕಾಗಿದೆ ಅವರು ಏಸು ಪ್ರತಿಮೆ ವಿಚಾರದಲ್ಲಿ ಧರ್ಮ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ನಾವು ಸಾಮರಸ್ಯಕ್ಕಾಗಿ ಜನಬೆಂಬಲ ಕ್ರೋಡೀಕರಿಸಲು ಸಿದ್ಧರಿದ್ದೇವೆ ಎಂದರು.

ಅಮೆರಿಕದಲ್ಲಿ ಮಠ-ಮಂದಿರ ಕಟ್ಟಲು ಅವಕಾಶ ಕೊಟ್ಟಿದ್ದಾರೆ. ಇಂಡೋನೇಷಿಯಾದಲ್ಲಿ ಕೃಷ್ಣಾರ್ಜುನ ಗೀತೋಪದೇಶಕ್ಕೆ ಅವಕಾಶ ನೀಡಲಾಗಿದೆ. ಮಲೇಷ್ಯಾದಲ್ಲಿ ಸರಕಾರಿ ಉದ್ಯೋಗದಲ್ಲಿ ಶೇ.5ರಷ್ಟು ಹಿಂದೂಗಳಿಗೆ ಅವಕಾಶ ಕೊಟ್ಟಿದ್ದಾರೆ. ದುಬೈನಲ್ಲೂ ದೇವಾಲಯ ಸ್ಥಾಪನೆಗೆ ಅವಕಾಶ ಕೊಟ್ಟಿದ್ದಾರೆ. ಸಂವಿಧಾನದತ್ತ ಧಾರ್ಮಿಕ ಹಕ್ಕಿನ ಪ್ರಕಾರ ನಡೆದುಕೊಳ್ಳುವುದು ತಪ್ಪಾ ಎಂದು ಅವರು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಬ್ದುಲ್ ಸಲೀಂ, ಕಾಂಗ್ರೆಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿರಜ್‌ಪಾಲ್, ಜಯಶೀಲ ಅಡ್ಯಂತಾಯ, ವಿಶ್ವಾಸ್‌ದಾಸ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News