ಜ.22ರಂದು ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಾಗುವುದಿಲ್ಲ : ಹೈಕೋರ್ಟಿಗೆ ಹೇಳಿದ ದೆಹಲಿ ಸರಕಾರ

Update: 2020-01-15 09:15 GMT

ಹೊಸದಿಲ್ಲಿ :  ನಿರ್ಭಯಾ  ಪ್ರಕರಣದಲ್ಲಿ ಗಲ್ಲು ಶಿಕ್ಷೆ ವಿಧಿಸಲ್ಪಟ್ಟ ನಾಲ್ವರ ಪೈಕಿ ಒಬ್ಬ ಕ್ಷಮಾದಾನ ಕೋರಿ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವುದರಿಂದ ಜ. 22ರಂದು ಅವರ ಗಲ್ಲು ಶಿಕ್ಷೆ ಖಂಡಿತ ನೆರವೇರುವುದಿಲ್ಲ ಎಂದು ದೆಹಲಿ ಸರಕಾರ ಹೈಕೋರ್ಟಿಗೆ ಬುಧವಾರ ಹೇಳಿದೆ.

ಜ.22ರಂದು ಬೆಳಗ್ಗೆ 7 ಗಂಟೆಗೆ ತಿಹಾರ್ ಜೈಲಿನಲ್ಲಿ ಅಪರಾಧಿಗಳಾದ ವಿನಯ್ ಶರ್ಮ, ಮುಕೇಶ್ ಕುಮಾರ್, ಅಕ್ಷಯ್ ಕುಮಾರ್ ಸಿಂಗ್ ಹಾಗು ಪವನ್ ಗುಪ್ತಾ ಅವರನ್ನು ಗಲ್ಲಿಗೇರಿಸಲಾಗುವುದು ಎಂದು ಕಳೆದ ವಾರ ದಿಲ್ಲಿ  ಕೋರ್ಟ್ ಹೇಳಿತ್ತು. ಆದರೆ ನಾಲ್ವರಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಗುರುವಾರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ಅದು ತಿರಸ್ಕೃತಗೊಂಡರೂ ಅಪರಾಧಿಯೊಬ್ಬನಿಗೆ  ಮರಣದಂಡನೆ ಶಿಕ್ಷೆ ವಿಧಿಸುವುದಕ್ಕಿಂತ ಮುಂಚೆ 14 ದಿನಗಳ ನೋಟಿಸ್ ನೀಡಬೇಕಿದೆ.

ಕ್ಷಮಾದಾನ ಅರ್ಜಿ ಕುರಿತು ತೀರ್ಮಾನ ಕೈಗೊಳ್ಳದ ಹೊರತು ನಾಲ್ಕು ಮಂದಿಯನ್ನು ಜ. 22ರಂದು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ದೆಹಲಿ ಸರಕಾರದ ಪರ ವಕೀಲ ರಾಹುಲ್ ಮೆಹ್ರಾ ಹೇಳಿದ್ದಾರೆ.

''ಅಪರಾಧಿಗಳು ಪ್ರತ್ಯೇಕವಾಗಿ ಕ್ಷಮಾದಾನ ಅರ್ಜಿ ಸಲ್ಲಿಸಲು ನಿರ್ಧರಿಸಿರುವುದು ಕಾನೂನು ಪ್ರಕ್ರಿಯೆಯನ್ನು ಇನ್ನಷ್ಟು ವಿಳಂಬಗೊಳಿಸಲು'' ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News