ನಮ್ಮನ್ನು ವಿಭಜಿಸಲು ಪ್ರಯತ್ನಿಸಿದಷ್ಟು ನಾವು ಒಂದಾಗುತ್ತೇವೆ: ಹರ್ಷ ಮಂದರ್
ಮಂಗಳೂರು, ಜ.15: ಭಾರತೀಯರಾದ ನಮ್ಮನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಯತ್ನಿಸಿದಂತೆಯೇ ನಾವು ಒಟ್ಟಾಗುತ್ತೇವೆ. ದ್ವೇಷದ ರಾಜನೀತಿ ನಮಗೆ ಬೇಕಾಗಿಲ್ಲ. ನಮ್ಮನ್ನು ವಿಭಜಿಸುವ ಕಾನೂನಿಗೆ ನಮ್ಮ ಸಹಮತವಿಲ್ಲ ಎಂದು ವಿಶ್ರಾಂತ ಐಎಎಸ್ ಅಧಿಕಾರಿ, ‘ವಿ ದಿ. ಪೀಪಲ್ ಆಫ್ ಇಂಡಿಯಾ’ ಪ್ರತಿನಿಧಿ ಹರ್ಷ ಮಂದರ್ ತಿಳಿಸಿದರು.
ಕೇಂದ್ರ ಸರಕಾರ ಜಾರಿಗೊಳಿಸಲುದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಇಂದು ನಡೆದ ಬೃಹತ್ ಪ್ರತಿಭಟನಾ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ನಮ್ಮದು ಗಾಂಧೀಜಿ, ಅಂಬೇಡ್ಕರ್, ಮೌಲಾನಾ ಆಝಾದ್, ನೇತಾಜಿಯವರ ಮಾನವತೆಯ ಭಾರತ. ನಮ್ಮ ಸಂವಿಧಾನ ಹೇಳುವಂತೆ ಎಲ್ಲರಿಗೂ ಇಲ್ಲಿ ಜೀವಿಸಲು ಸಮಾನವಾದ ಹಕ್ಕಿದೆ. ನಮ್ಮ ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರದ ಜತೆಗೆ ನಮ್ಮ ಇಚ್ಛೆಯ ಧರ್ಮಗಳನ್ನು ಅನಸುರಿಸುವ ಸ್ವಾತಂತ್ರವನ್ನೂ ನೀಡಿದೆ. ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಅದು ನಾವು ಒಬ್ಬರಿಗೊಬ್ಬರು ಜತೆಯಾಗಿ ಬಂಧುಗಳಾಗಿ ಜೀವಿಸುವ ಅಧಿಕಾರವನ್ನೂ ನೀಡಿದೆ. ಹಾಗಾಗಿ ಈ ಹೋರಾಟ ಕೇವಲ ಎರಡು ಕಾನೂನುಗಳ ವಿರುದ್ಧ ಮಾತ್ರ ಅಲ್ಲ. 100 ವರ್ಷಗಳ ಹಿಂದೆಯೇ ಈ ಹೋರಾಟ ಆರಂಭವಾಗಿದೆ. ಆದರೆ ಕೆಲ ವರ್ಷಗಳಿಂದ ಈ ಹೋರಾಟ ಜಡತ್ವವನ್ನು ಪಡೆದಿತ್ತು. ಇದೀಗ ಮತ್ತೆ ಜೀವಕಳೆ ಪಡೆದುಕೊಂಡಿದೆ ಎಂದು ಅವರು ಮಾರ್ಮಿಕವಾಗಿ ನುಡಿದರು.
1925ರಲ್ಲಿಯೇ ಈ ಹೋರಾಟ ಆರ್‌ಎಸ್‌ಎಸ್ ಸಂಘಟನೆಯ ಅಸ್ತಿತ್ವದೊಂದಿಗೆ ಆರಂಭಗೊಂಡಿತ್ತು. ಹಿಂದೂ ಮಹಾಸಭಾ ಸೇರಿದಂತೆ ಆ ಬಳಿಕ ಹಲವು ಸಂಘ ಸಂಸ್ಥೆಗಳು ಹಿಂದೂಸ್ತಾನವನ್ನು ಹಿಂದೂರಾಷ್ಟ್ರವನ್ನಾಗಿಸುವ ಷಡ್ಯಂತ್ರಕ್ಕೆ ಬೆಂಬಲ ಸೂಚಿಸಿದವು. ಬ್ರಿಟಿಷರ ವಿರುದ್ಧ ಅಸಹಕಾರ, ಅಹಿಂಸಾ ಚಳವಳಿಯ ಮೂಲಕ ಸ್ವಾತಂತ್ರ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮಾ ಗಾಂಧೀಜಿ ಕಲ್ಪನೆಯ ಭಾರತದಲ್ಲಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ರವರ ಸಂವಿಧಾನದ ಆಶಯಗಳಲ್ಲಿ ಈ ಸಂಘಟನೆಗಳಿಗೆ ಸಹಮತವಿರಲಿಲ್ಲ. ಇದು ಕೇವಲ ಹಿಂದೂಗಳ ದೇಶ ಎಂಬುದೇ ಅವರ ವಾದ. ಸಮಸ್ತರ ಹಿಂದೂಸ್ತಾನವನ್ನು ಹಿಂದೂಗಳ ರಾಷ್ಟ್ರವನ್ನಾಗಿಸಬೇಕೆಂಬ ಹುನ್ನಾರವೇ ಈ ಕಾನೂನುಗಳ ಜಾರಿಗೊಳಿಸುವ ಪ್ರಯತ್ನ ಎಂದು ಸಿಎಎ ಹಾಗೂ ಎನ್‌ಆರ್‌ಸಿ ತಿದ್ದುಪಡಿ ಬಗ್ಗೆ ಅವರು ವಿರೋಧ ವ್ಯಕ್ತಪಡಿಸಿದರು.
1947ರಲ್ಲಿ ಸ್ವಾತಂತ್ರ್ಯ ಸಂದರ್ಭ ದೇಶ ವಿಭಜನೆಯಾದಾಗ ಧರ್ಮ ಆಧಾರಿತವಾಗಿ ಪಾಕಿಸ್ತಾನ ಮುಸ್ಲಿಂ ರಾಷ್ಟ್ರವಾದರೂ, ಭಾರತದಲ್ಲಿ ಬಂಧುತ್ವದ ಆಧಾರದಲ್ಲಿ ಆಯ್ಕೆಯ ಮೇರೆಗೆ ಇರಲು ಅವಕಾಶ ನೀಡಲಾಗಿತ್ತು. ಹಾಗಾಗಿ ಭಾರತದಲ್ಲಿರುವ ಮುಸಲ್ಮಾನರು ಅಂದು ಆಯ್ಕೆಯ ಆಧಾರದಲ್ಲಿ ಭಾರತದಲ್ಲಿ ಉಳಿದರೇ ಹೊರತು ಅದೃಷ್ಟದಿಂದಲ್ಲ. ಅಂದು ಯಾರೆಲ್ಲಾ ಹಿಂದೂಸ್ತಾನದಲ್ಲಿರಬೇಕು ಎಂದು ಕೇಳಿದಾಗ ಅಂದಿನ ಪ್ರಧಾನಿ ಜವಾಹರಲಾಲ್ ಯಾರೆಲ್ಲಾ ಇಲ್ಲಿ ಇರಬಯಸುವರೋ ಅವರೆಲ್ಲಾ ಇರಬಹುದು ಎಂದರು. 1955ರಲ್ಲಿ ಕಾನೂನು ಆಯಿತು. ಅದರಂತೆ ಯಾರು ಇಲ್ಲಿ ಹುಟ್ಟಿದರೋ ಅವರೆಲ್ಲಾ ಭಾರತೀಯರು ಎನ್ನಲಾಯಿತು. 2003ರಲ್ಲಿ ವಾಜಪೇಯಿ ಸರ್ಕಾರದಲ್ಲಿ ಈ ಕಾನೂನನ್ನೇ ಬದಲಿಸಲಾಯಿತು. ನಿಮ್ಮ ಹೆತ್ತವರು ಅಕ್ರಮ ವಲಸಿಗರಾಗಿದ್ದರೆ ಅವರು ದೇಶದ ನಿವಾಸಿಗಳಲ್ಲ ಎಂಬುದು ಈ ಕಾನೂನು. ಆದರೆ ಆಗ ಇದನ್ನು ವಿರೋಧಿಸಬೇಕಾದ ಕಾಂಗ್ರೆಸ್ ಮೌನವಾಗಿತ್ತು. ಇದೀಗ ಮತ್ತೆ ದೇಶದ ಜನತೆ ಕೈಯ್ಯಲ್ಲಿ ರಾಷ್ಟ್ರ ಧ್ವಜವನ್ನು ಹಿಡಿದು ಧರ್ಮಾತೀತವಾಗಿ ಬೀದಿಗಿಳಿದು ಒಂದಾಗಿದ್ದಾರೆ. ಸಿಎಎ ಅಥವಾ ಎನ್‌ಆರ್‌ಸಿ ಬಗ್ಗೆ ಬಹುತೇಕರಿಗೆ ಮಾಹಿತಿ ಇಲ್ಲ. ಆದರೆ ಸರಕಾರ ಧರ್ಮದ ಆಧಾರದಲ್ಲಿ ನಮ್ಮನ್ನು ವಿಭಜಿಸಲು ಹೊರಟಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇದು ಈ ಹೋರಾಟದ ಬಹು ದೊಡ್ಡ ಜಯ ಎಂದವರು ಹೇಳಿದರು.
ಈ ಸಮರ ಎಷ್ಟು ದಿನ ಮುಂದುವರಿಯಲಿದೆ ಗೊತ್ತಿಲ್ಲ. ಆದರೆ ನಾವು ದಾಖಲೆ ನೀಡುವುದಿಲ್ಲ ಎಂಬುದರ ಜತೆಗೆ ನಾವು ಧರ್ಮಾತೀತವಾಗಿ ಒಂದಾಗಬೇಕಿದೆ. ಇದುವೇ ನಮ್ಮ ಹೋರಾಟದ ಅಸ್ತ್ರ ಎಂದು ಹರ್ಷ ಮಂದರ್ ಅಭಿಪ್ರಾಯಿಸಿದರು.
‘‘ನನ್ನ ಧರ್ಮ ಮಾನವೀಯತೆ. ಸರಕಾರ ನನ್ನಲ್ಲಿ ಧರ್ಮದ ಆಧಾರದ ಲ್ಲಿ ಗುರುತಿಸಲು ದಾಖಲೆ ಕೇಳಿದರೆ ನಾನು ಈ ಕಾನೂನಿನ ಮೂಲಕ ನನ್ನಿಂದ ಬೇರ್ಪಡಿಸಲು ಮುಂದಾಗಿರುವ, ನನ್ನ ಸಹೋದರನಾದ ಮುಸಲ್ಮಾನನ ಧರ್ಮವನ್ನು ಸರಕಾರಿ ದಾಖಲೆ ಯಲ್ಲಿ ನಮೂದಿಸಲಿದ್ದೇನೆ. ದಾಖಲೆಗಳಿಲ್ಲದ ನನ್ನ ಸಹೋದರರನ್ನು ಬಂಧನ ಕೇಂದ್ರಕ್ಕೆ (ಡಿಟೆನ್ಶನ್ ಸೆಂಟರ್) ಕಳುಹಿಸಿದರೆ ನಾನು ಅವರ ಜತೆ ಬಂಧನ ಕೇಂದ್ರಕ್ಕೆ ಹೋಗುವೆ. ಅಂದು ಸ್ವಾತಂತ್ರ್ಯಕ್ಕಾಗಿ ಮಹಾತ್ಮ ಗಾಂಧಿಯವರು ನಡೆಸಿದ ಅಸಹಕಾರ ಮಾದರಿಯ ಚಳವಳಿ ನಮ್ಮದು. ನಮ್ಮ ಪೌರತ್ವ ಸಾಬೀತುಪಡಿಸಲು ದಾಖಲೆ ಕೇಳಿದರೆ ನಾವು ನೀಡುವುದಿಲ್ಲ. ನಮ್ಮ ಹೋರಾಟದಲ್ಲಿ ಸರಕಾರ ಹಿಂಸೆ ಆಗಬೇಕೆಂದು ಬಯಸುತ್ತಿದೆ. ನಮ್ಮ ಶೇ. 1 ಹಿಂಸೆಗೆ ಸರಕಾರದಿಂದ ಶೇ. 100 ಹಿಂಸೆ ಆಗಲಿದೆ . ಆ ಬಗ್ಗೆ ನಾವು ಎಚ್ಚರ ವಹಿಸಬೇಕು. ಹೃದಯದಲ್ಲಿ ಪ್ರೀತಿಯನ್ನು ಹೊತ್ತು ಸಂವಿಧಾನಕ್ಕೆ ಜೈಕಾರವನ್ನು ನಾವು ಹಾಕಬೇಕಾಗಿದೆ.
ಹರ್ಷ ಮಂದರ್, ವಿಶ್ರಾಂತ ಐಎಎಸ್ ಅಧಿಕಾರಿ