×
Ad

ಲಕ್ಷಕ್ಕೂ ಅಧಿಕ ಜನರ ನಡುವೆಯೂ ಸ್ವಯಂ ಸೇವಕರ ಅಚ್ಚುಕಟ್ಟುತನ !

Update: 2020-01-15 20:52 IST

ರಾರಾಜಿಸಿದ ರಾಷ್ಟ್ರ ಧ್ವಜ, ಮೊಳಗಿದ ಆಝಾದಿ ಘೋಷಣೆ

ಮಂಗಳೂರು, ಜ.15: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ನಡೆದ ಪ್ರತಿಭಟನಾ ಸಮಾವೇಶವು ಲಕ್ಷಕ್ಕೂ ಅಧಿಕ ಜನರನ್ನು ಸಂಘಟಿಸುವಲ್ಲಿ ಯಶಸ್ವಿಯಾಯಿತು.

ಅಡ್ಯಾರು- ಕಣ್ಣೂರಿನ ಶಹಾ ಗಾರ್ಡನ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಕಣ್ಣು ಹಾಯಿಸಿದಂತೆಲ್ಲಾ ರಾಷ್ಟ್ರ ಧ್ವಜ ಹಾರಾಡಿದರೆ, ಸಮಾವೇಶದುದ್ದಕ್ಕೂ ಆಗಾಗ್ಗೆ ಆಝಾದಿ ಘೋಷಣೆ ಮೊಳಗಿತು.

ನಗರದೆಲ್ಲೆಡೆ ಬಿಗಿ ಪೊಲೀಸ್ ಕಣ್ಗಾವಲಿರಿಸಲಾಗಿತ್ತು. ಇದರ ಜತೆಯಲ್ಲೇ ಸ್ವಯಂ ಸೇವಕರು ನಗರದ ಪಂಪ್‌ವೆಲ್‌ನಿಂದಲೇ ವಾಹನಗಳ ಸಂಚಾರ ನಿಯಂತ್ರಣದಲ್ಲಿ ಅಚ್ಚುಕಟ್ಟುತನ, ಶಿಸ್ತು, ಸಂಯಮ ಪ್ರದರ್ಶಿಸುವ ಮೂಲಕ ಗಮನ ಸೆಳೆದರು.

ಶಹೀದ್ ಅಬ್ದುಲ್ ಜಲೀಲ್ ಕಂದಕ್ ಹಾಗೂ ನೌಶೀನ್ ಕುದ್ರೋಳಿ ವೇದಿಕೆಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುವಾ ನೆರವೇರಿಸಿದರು. ಉಡುಪಿ ಜಿಲ್ಲಾ ಖಾಝಿ ಅಲ್ ಹಾಜ್ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟನಾ ಮಾತುಗಳನ್ನಾಡಿದರು.

ಈ ಮಣ್ಣಿನಲ್ಲಿ ಹುಟ್ಟಿದವರಿಗೆ ಯಾರೂ ಪೌರತ್ವವನ್ನು ಔದಾರ್ಯವಾಗಿ ನೀಡಬೇಕಾಗಿಲ್ಲ. ಎಲ್ಲರಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ನು ನಮ್ಮ ಸಂವಿಧಾನ ನಮಗೆ ನೀಡಿದೆ. ಯಾವುದೇ ಮತ ಧರ್ಮಗಳ ವ್ಯತ್ಯಾಸವಿಲ್ಲದೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನುಭವ ನಮಗಿದೆ. ಅದನ್ನು ನಾವು ಮರೆತಿಲ್ಲ. ಈಗ ಕೂಡ ಇದೇ ಮಾದರಿಯಲ್ಲಿ ನಮ್ಮ ಈ ಸಮರ ಹೋರಾಟ ಮುಂದುರಿಯಲಿದೆ ಎಂದು ಅವರು ಹೇಳಿದರು.

'ಪ್ರಧಾನಿ ಮೋದಿ - ಶಾ ಅಂತಾರಾಷ್ಟ್ರೀಯ ಮಟ್ಟದ ಗಿಮಿಕ್ ಕಲಾವಿದರು'

ಯಾವುದೇ ಹೂಡಿಕೆ ಇಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಗಿಮಿಕ್ ಕಲಾವಿದರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಎಂದು ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿ ಮೂದಲಿಸಿದರು.

ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನ, ಸ್ವಚ್ಛ ಭಾರತ, ಬೇಟಿ ಬಚಾವೊ ಮೊದಲಾದ ಯೋಜನೆಗಳನ್ನು ಜಾರಿಗೊಳಿಸಿದರು. ಆದರೆ ಜಾಹೀರಾತುಗಳಲ್ಲಿ ತಾವೇ ಕಾಣಿಸಿಕೊಂಡರು. ಇದು ಗಿಮಿಕ್ ಎಂದು ಅವರು ಟೀಕಿಸಿದರು.

ಬ್ರಿಟಿಷರ ಒಡೆದಾಳುವ ಭಾಗವಾಗಿಯೇ ಸಿಎಎ ಹಾಗೂ ಎನ್‌ಆರ್‌ಸಿ ಜಾರಿಗೆ ಬರುತ್ತಿದೆ. ಸರಕಾರ ಬ್ರಿಟಿಷರ ಪರ ಯೋಚನೆ ಮಾಡಿದರೆ, ನಾವು ಭಾರತೀಯರಾಗಿ ಯೋಚಿಸುತ್ತೇವೆ. ಭಾರತವೆಂದರೆ ಅದು ಸರ್ವಜನಾಂಗದ ಶಾಂತಿಯ ತೋಟ ಎಂದವರು ಹೇಳಿದರು.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತರಾಟೆಗೈದ ಸುಧೀರ್ ಕುಮಾರ್, ನೀವು ನೀರುಳ್ಳಿ ಬೆಳ್ಳುಳ್ಳಿ ತಿನ್ನದಿರಬಹುದು. ಆದರೆ ಇದು ಸಾಮರಸ್ಯದ ಭೂಮಿ. ಇಲ್ಲಿ ಜಾತಿ ಧರ್ಮದ ಬೇಧವಿಲ್ಲದೆ ಇದನ್ನು ತಿನ್ನುವವರಿದ್ದಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪರ ಹೇಳಿಕೆಯನ್ನು ಉಲ್ಲೇಖಿಸಿ ಮಾತನಾಡಿದ ಸುಧೀರ್ ಕುಮಾರ್, ನೀವು ಹಾಗೂ ಸಂಸದೆ ಶೋಭಾ ಕರಂದ್ಲಾಜೆಯವರು ಬಿಜೆಪಿ ಬಿಟ್ಟ ಸಂದರ್ಭ ಟಿಪ್ಪು ಸುಲ್ತಾನ್ ಶಹೀದ್ ಅಂತ ಹೇಳಿದ್ದೀರಿ, ಮತ್ತೆ ಬಿಜೆಪಿಗೆ ಬಂದು ಟಿಪ್ಪು ಸುಲ್ತಾನ ಮತಾಂಧ ಎಂದು ಹೇಳಿದ್ದೀರಿ. ಹಾಗಾಗಿ ನೀವು ಹೇಳಿದ್ದು ನಾವು ನಂಬಿ ಇರಲು ಆಗುವುದಿಲ್ಲ ಎಂದರು.

ಸಮಾವೇಶದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹಾಜಿ ಇಬ್ರಾಹಿಂ ಕೋಡಿಜಾಲ್ ಸ್ವಾಗತಿಸಿದರು. ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಿದ್ದರು. ಹಾಜಿ ಬಿ.ಎ. ಮುಮ್ತಾಝ್ ಅಲಿ ವಂದಿಸಿದರು. ಬಿ. ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು. ‘ಸಾರೇ ಜಹಾಂಸೆ ಅಚ್ಚಾ’ ಹಾಡಿನೊಂದಿಗೆ ಪ್ರತಿಭಟನಾ ಸಮಾವೇಶ ಆರಂಭಗೊಂಡು, ರಾಷ್ಟ್ರಗೀತೆಯೊಂದಿಗೆ ಸಮಾಪನಗೊಂಡಿತು.

‘‘ವಕೀಲನಾಗಿ ನಾನು ಹೇಳುತ್ತಿದ್ದೇನೆ. ಇನ್ಸ್‌ಪೆಕ್ಟರ್ ಶಾಂತಾರಾಮ್‌ರವರೇ, ಶರೀಫ್‌ರವರೇ, ಕಮಿಷನರ್ ಹರ್ಷರವರೇ, ಕೋವಿ ಕೊಟ್ಟಿದೆ ಎಂದು ಗುಂಡು ಹಾರಿಸಿದರೆ ಕ್ಷಮಿಸಲು ಆಗುವುದಿಲ್ಲ. ದ.ಕ. ಜಿಲ್ಲೆಯ ಜನ ಅಷ್ಟು ಸುಲಭಕ್ಕೆ ಬಿಡುವುದಿಲ್ಲ’’.

- ಸುಧೀರ್ ಕುಮಾರ್ ಮುರೋಳಿ, ನ್ಯಾಯವಾದಿ

ಪಂಪ್‌ವೆಲ್ ಸೆ ಆಝಾದಿ !

ನಗರದ ಪಂಪ್‌ವೆಲ್ ಮೇಲ್ಸೇತುವೆಯ ನಿಧಾನಗತಿಯ ಕಾಮಗಾರಿ ವಿರುದ್ಧ ಸಮಾವೇಶದಲ್ಲಿ ಅಸಮಾಧಾನ ವ್ಯಕ್ತವಾಯಿತು. ಸಮಾವೇಶಕ್ಕೆ ನಗರದ ವಿವಿಧೆಡೆಗಳಿಂದ ವಾಹನಗಳಲ್ಲಿ ಆಗಮಿಸುತ್ತಿದ್ದ ಪ್ರತಿಭಟನಾಕಾರರು ರಾಷ್ಟ್ರಧ್ವಜದೊಂದಿಗೆ ಆಝಾದಿ ಘೋಷಣೆಗಳನ್ನು ಕೂಗುತ್ತಾ ಸಾಗುತ್ತಿದ್ದರು. ‘ಹಮ್ ಲೇಕೇ ರಹೇಂಗೆ ಆಝಾದಿ, ಸಿಎಎ, ಎನ್ ಆರ್‌ಸಿಸೆ ಆಝಾದಿ’ ಎಂಬ ಘೊಷಣೆಯನ್ನು ಕೂಗಲಾಗುತ್ತಿತ್ತು. ಇದರ ನಡುವೆ ಪಂಪ್‌ವೆಲ್ ಸೆ ಆಝಾದಿ ಎಂಬ ಘೋಷಣೆಯೂ ಕೇಳಿ ಬರುತ್ತಿತ್ತು. ಪ್ರತಿಭಟನಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳಿಯವರು ಸಂಸದ ನಳಿನ್ ಕುಮಾರ್ ಅವರನ್ನು ನಳಿನ್ ಕುಮಾರ್ ಪಂಪ್‌ವೆಲ್ ಎಂದೇ ಉಲ್ಲೇಖಿಸಿದರು.

ಕ್ರೈಸ್ತ ಭಗಿನಿಯರಿಗೆ ಗೌರವ

ಸಮಾವೇಶದಲ್ಲಿ ಕೆಲ ಕ್ರೈಸ್ತ ಭಗಿನಿಯರು ಆಗಮಿಸಿದ್ದರು. ಅವರು ಸಮಾವೇಶದಿಂದ ಹಿಂತಿರುಗುವಾಗ ಪ್ರವೇಶ ದ್ವಾರದಲ್ಲಿ ಸಾಕಷ್ಟು ಜನಸಂದಣಿಯಿಂದ ಹೊರ ಬರುವುದು ಕಷ್ಟವಾಗಿತ್ತು. ರಸ್ತೆಯುದ್ದಕ್ಕೂ ಜನಸಮೂಹ ಸೇರಿತ್ತು. ಆಗ ಅಲ್ಲಿದ್ದ ಸ್ವಯಂಸೇವಕರು ಮಾನವ ಸರಪಳಿಯ ಮೂಲಕ ಕ್ರೈಸ್ತ ಭಗಿನಿಯರು ಆರಾಮವಾಗಿ ನಡೆದು ಹೋಗಲು ಅವಕಾಶ ಕಲ್ಪಿಸುವ ಮೂಲಕ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News