ಸಂವಿಧಾನ ವಿರೋಧಿ ಕಾಯ್ದೆ ಹಿಂಪಡೆಯುವವರೆಗೆ ಚಳುವಳಿ ನಿರಂತರ: ಕಣ್ಣನ್ ಗೋಪಿನಾಥನ್
ಮಂಗಳೂರು, ಜ.15: ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಸಂವಿಧಾನ ವಿರೋಧಿ ಕಾಯ್ದೆಯನ್ನು ಜಾರಿಗೊಳಿಸಲು ತರಾತುರಿಯಲ್ಲಿ ಮುಂದಾಗಿದ್ದರೂ ಕೂಡ ದೇಶದ ಯುವ ಜನತೆ ಅದರಲ್ಲೂ ವಿದ್ಯಾರ್ಥಿ ಸಮೂಹ ಈ ಕರಾಳ ಕಾಯ್ದೆಯ ವಿರುದ್ಧ ಸೆಟೆದು ನಿಂತಿದೆ. ದೇಶಾದ್ಯಂತ ಚಳುವಳಿ ರೂಪದಲ್ಲೇ ಇದು ಮುನ್ನಡೆಯುತ್ತಿದೆ. ಕೇಂದ್ರ ಸರಕಾರ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯುವವರೆಗೆ ಚಳುವಳಿ ನಿರಂತರವಾಗಿರಬೇಕು ಎಂದು ‘ನಾವು ಭಾರತೀಯರು’ ತಂಡದ ಸದಸ್ಯ, ವಿಶ್ರಾಂತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗ ದಲ್ಲಿ ಅಡ್ಯಾರ್ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರು ಮುಖ್ಯ ಭಾಷಣಗೈದರು.
ನಾವೇನೇ ಮಾಡಿದರೂ ಕೂಡ ಜನರು ನಮ್ಮನ್ನು ಪ್ರಶ್ನಿಸುವುದಿಲ್ಲ ಎಂಬ ಭಾವನೆ ಕೇಂದ್ರ ಸರಕಾರದ್ದಾಗಿತ್ತು. ಅದಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣ ನಿಯಂತ್ರಣದ ಹೆಸರಿನಲ್ಲಿ ನೋಟು ಅಮಾನ್ಯೀಕರಣಗೊಳಿಸಿದರು. ಬಳಿಕ ಜಿಎಸ್‌ಟಿ ಜಾರಿಗೊಳಿಸಿದರು. ಕಾಶ್ಮೀರದಲ್ಲಿ 370ನೆ ವಿಧಿ ರದ್ದುಗೊಳಿಸಿದರು. ಜನರು ಭಯದಿಂದ ತತ್ತರಿಸಿ ಮನೆಯೊಳಗೆ ಉಳಿದು ಬಿಡುತ್ತಾರೆಂದು ನಂಬಿದ್ದರು. ಒಂದು ಮಿತಿಯವರೆಗೆ ಯಾರನ್ನೇ ಆದರೂ ಭಯಪಡಿಸಬಹುದು. ಆದರೆ ಜನತೆ ಪ್ರಶ್ನಿಸಲು ಆರಂಭಿಸಿದಾಗ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಆರಂಭಿಸಿದಾಗ ಪ್ರಧಾನಿ ಎನ್‌ಆರ್‌ಸಿ ಬಗ್ಗೆ ಸುಳ್ಳುಗಳನ್ನೇ ಹೇಳತೊಡಗಿದರು. ಇಂದು ನಾವೆಲ್ಲಾ ನಮ್ಮ ಭಯವನ್ನು ಬಿಟ್ಟು, ಸಂವಿಧಾನದ ರಕ್ಷಣೆ, ಜಾತ್ಯತೀತತೆಯನ್ನು ಉಳಿಸುವ ಜವಾಬ್ಧಾರಿಯೊಂದಿಗೆ ಒಗ್ಗಟ್ಟಾಗಿದ್ದೇವೆ ಎಂದು ಕಣ್ಣನ್ ಗೋಪಿನಾಥನ್ ನುಡಿದರು.
ದೇಶದ ರಕ್ಷಣೆಗಾಗಿ ಜನರು ಬೀದಿಗಿಳಿದಿದ್ದಾರೆ. ಅಡಳಿತ ವರ್ಗವು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಈಗಾಗಲೇ ದೇಶದ 50ಕ್ಕೂ ಅಧಿಕ ನಗರಗಳಿಗೆ ಭೇಟಿ ನೀಡಿದ್ದೇನೆ. ಕೋಲ್ಕತ್ತಾಕ್ಕೂ ಭೇಟಿ ನೀಡಿದ್ದು ಅಲ್ಲಿ ಹೋರಾಟ ತೀವ್ರವಾಗಿದೆ. ಇಲ್ಲಿಯೂ ಹೋರಾಟ ತೀವ್ರಗೊಂಡು ಧ್ವನಿ ದಿಲ್ಲಿಯವರಿಗೆ ತಲುಪಬೇಕಾಗಿದೆ’ ಎಂದು ಹೇಳಿದ ಕಣ್ಣನ್ ಗೋಪಿನಾಥನ್, ‘ಆವಾಝ್ ದೋ ಹಮ್ ಏಕ್ ಹೆ’ ಎಂಬ ಘೋಷಣೆಯನ್ನು ಕೂಗಿ ಹೋರಾಟದ ಕಿಚ್ಚು ಹೆಚ್ಚಿಸಿದರು.
ವ್ಯಂಗ್ಯವಾಡಿದ ಕಣ್ಣನ್: ಚಲಿಸುತ್ತಿರುವ ವಾಹನಗಳ ಹಿಂದೆ ನಾಯಿಗಳು ಓಡುತ್ತವೆ. ವಾಹನ ನಿಂತಾಗ ನಾಯಿಗಳೂ ನಿಲ್ಲುತ್ತವೆ. ಮುಂದೇನು ಮಾಡಬೇಕು ಎಂದು ಆ ನಾಯಿಗಳಿಗೆ ಗೊತ್ತಾಗುತ್ತಿಲ್ಲ. ಹಾಗಾಗಿದೆ, ಕೇಂದ್ರ ಸರಕಾರದ ಅವಸ್ಥೆ. ಯಾವುದೇ ಮುಂದಾಲೋಚನೆ ಇಲ್ಲದೆ ಒಂದೊಂದು ನೀತಿಯನ್ನು ಜಾರಿಗೊಳಿಸುತ್ತದೆ. ಅದರ ಸಾಧಕ-ಭಾದಕಗಳ ಬಗ್ಗೆ ಕೇಂದ್ರ ಸರಕಾರಕ್ಕೆ ಅರಿವು ಇಲ್ಲ. ನೋಟು ಬ್ಯಾನ್ ಮಾಡಿತು, ಜಿಎಸ್‌ಟಿ ಜಾರಿಗೊಳಿಸಿತು, ಕಾಶ್ಮೀರದಲ್ಲಿ 370ನೆ ವಿಧಿ ರದ್ದುಪಡಿಸಿತು. ಈಗ ಎನ್‌ಆರ್‌ಸಿ-ಸಿಎಎ-ಎನ್‌ಪಿಆರ್ ಅನುಷ್ಠಾನಕ್ಕೆ ಪ್ರಯತ್ನ ಪಡುತ್ತಿದೆ. ಇದರ ವಿರುದ್ಧ ಹೋರಾಟದ ಧ್ವನಿ ಮುಗಿಲು ಮುಟ್ಟುತ್ತಿವೆ. ಆದರೆ ಮುಂದೇನು ಎಂಬುದು ಕೇಂದ್ರ ಸರಕಾರಕ್ಕೆ ತಿಳಿದಿಲ್ಲ. ಒಟ್ಟಿನಲ್ಲಿ ಕೇಂದ್ರ ಸರಕಾರದ ಸ್ಥಿತಿ ವಾಹನಗಳ ಹಿಂದೆ ಓಡುವ ನಾಯಿಯಂತಾಗಿದೆ ಎಂದು ಕಣ್ಣನ್ ವ್ಯಂಗ್ಯವಾಡಿದರು.
ಈ ಸಂದರ್ಭ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ಕರ್ನಾಟಕ ಸಮಸ್ತ ಮುಶಾವರ ರಾಜ್ಯ ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್‌ಕೆಎಸ್‌ಎಂ ದಅ್ವಾ ಕಾರ್ಯದರ್ಶಿ ಎಂಜಿ ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಡಿವೈಎಫ್‌ಐ ದ.ಕ.ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಮಾತನಾಡಿದರು.
ವೇದಿಕೆಯಲ್ಲಿ ಯೆನೆಪೊಯ ವಿವಿಯ ಕುಲಪತಿ ಹಾಜಿ ಯೆನೆಪೊಯ ಅಬ್ದುಲ್ಲ ಕುಂಞಿ, ಮಾಜಿ ಸಚಿವರಾದ ರಮಾನಾಥ ರೈ, ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಐವನ್ ಡಿಸೋಜ ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯುಕೆ ಕಣಚೂರು ಮೋನು, ಮಾಜಿ ರಾಜ್ಯಸಭಾ ಸದಸ್ಯ ಬಿ. ಇಬ್ರಾಹೀಂ, ಮಾಜಿ ಶಾಸಕರಾದ ಮೊಯ್ದಿನ್ ಬಾವಾ, ಜೆ.ಆರ್.ಲೋಬೊ, ಸೆಂಟ್ರಲ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಹಾಜಿ ಮುಹಮ್ಮದ್ ಹನೀಫ್, ಉಪಾಧ್ಯಕ್ಷರಾದ ಸೆಯ್ಯದ್ ಅಹ್ಮದ್ ಭಾಷಾ ತಂಙಳ್, ಇಮ್ತಿಯಾಝ್ ಕಾರ್ಕಳ, ಹಾಜಿ ಸಿ. ಮಹಮೂದ್, ಕಾರ್ಯಕಾರಿ ಸಮಿತಿ ಸದಸ್ಯ ಹಾಜಿ ಎಸ್.ಎಂ. ರಶೀದ್, ಸಮಾವೇಶದ ಸಂಯೋಜಕ ಮನ್ಸೂರ್ ಅಹ್ಮದ್ ಅಝಾದ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಮುಹಮ್ಮದ್ ಇಲ್ಯಾಸ್ ತುಂಬೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಜಿ.ಎ.ಬಾವಾ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿಎಚ್ ಖಾದರ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಟಿಆರ್‌ಎಫ್ ಸ್ಥಾಪಕಾಧ್ಯಕ್ಷ ಅಬ್ದುರ್ರವೂಫ್ ಪುತ್ತಿಗೆ, ಬಾಷಾ ಸಾಹೇಬ್ ಕುಂದಾಪುರ, ಹಾಜಿ ಕೆ.ಎಸ್. ಅಬ್ದುಲ್ ಹಮೀದ್, ಹಾಜಿ ಕಾಸಿಂ ಎಚ್‌ಕೆ ಹೈದರ್ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರತಿಭಟನಾ ಸಮಾವೇಶದಲ್ಲಿ ಹ್ಯುಮ್ಯಾನಿಟಿ ಫೋರಂನ ಮಾಧ್ಯಮ ವಿಭಾಗದ ಸಂಚಾಲಕ ಉಮರ್ ಯುಎಚ್ ಹಕ್ಕೊತ್ತಾಯ ಮಂಡಿಸಿದರು.
1.ಸಂವಿಧಾನ ವಿರೋಧಿ, ಜನ ವಿರೋಧಿ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಕಾಯ್ದೆಗಳು ರದ್ದಾಗಬೇಕು.
2. ಎನ್‌ಆರ್‌ಸಿಯ ಭಾಗವಾಗಿಯೇ ನಡೆಯುತ್ತಿರುವ ಎನ್‌ಪಿಆರ್ ಪ್ರಕ್ರಿಯೆಯನ್ನು ಕರ್ನಾಟಕ ಸರಕಾರ ಕೂಡಲೇ ರದ್ದುಗೊಳಿಸಬೇಕು.
3. ಧರ್ಮಾಧಾರಿತ ತಾರತಮ್ಯ ಮಾಡುವ ಸಿಎಎ ಬದಲಿಗೆ ಎಲ್ಲಾ ಬಗೆಯ ಧಾರ್ಮಿಕ ಹಾಗೂ ಇತರ ದಮನಗಳಿಗೆ ತುತ್ತಾಗಿರುವ ಎಲ್ಲಾ ನಿರಾಶ್ರಿತರಿಗೂ ತಾರತಮ್ಯವಿಲ್ಲದೆ ಆಶ್ರಯ ಕೊಡುವ ವಲಸೆ ನೀತಿ ಜಾರಿಯಾಗಬೇಕು.
4. ವಿಶ್ವ ಸಂಸ್ಥೆಯ 1948ರ ವಲಸೆ ಸಂಬಂಧೀ ಸನ್ನದನ್ನು ಭಾರತ ಸರಕಾರ ಕೂಡಲೇ ಅನುಮೋಧಿಸಬೇಕು.
5. 2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಅನಗತ್ಯ ಗೋಲಿಬಾರ್ ನಡೆಸಿದ ಪೊಲೀಸ್ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಿ, ರಾಜ್ಯ ಸರಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
6. ಗೊಲೀಬಾರ್‌ನಲ್ಲಿ ಮೃತರಾದ ಅಮಾಯಕರಾದ ಅಬ್ದುಲ್ ಜಲೀಲ್ ಮತ್ತು ನೌಶೀನ್ ಕುಟುಂಬಕ್ಕೆ ರಾಜ್ಯ ಸರಕಾರವು ಘೋಷಿಸಿದ್ದ ತಲಾ 10 ಲಕ್ಷ ರೂ. ಪರಿಹಾರ ಹಿಂಪಡೆದಿದ್ದು ಖಂಡನಾರ್ಹ. ಕೂಡಲೇ ಸರಕಾರ ಘೋಷಿಸಿದ್ದ ಪರಿಹಾರವನ್ನು ಬಿಡುಗಡೆ ಮಾಡಬೇಕು
7. 2019ರ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು.
8. ಗೊಲೀಬಾರ್ ಮತ್ತು ಲಾಠಿಚಾರ್ಜ್‌ನಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆದವರ ಆಸ್ಪತ್ರೆ ವೆಚ್ಚವನ್ನು ರಾಜ್ಯ ಸರಕಾರ ಭರಿಸಬೇಕು.
9. 2019ರ ಡಿಸೆಂಬರ್ 19ರ ಘಟನೆಗಳಿಗೆ ಸಂಬಂಧಿಸಿ ಅಮಾಯಕರ ಮೇಲೆ ಹಾಕಲಾಗಿರುವ ಕೇಸುಗಳನ್ನು ಸರಕಾರ ಕೂಡಲೇ ಹಿಂಪಡೆಯಬೇಕು.
10. ಭಾರತದ ಜನರನ್ನು ಮತ್ತೊಮ್ಮೆ ಧಾರ್ಮಿಕವಾಗಿ ವಿಭಜನೆ ಮಾಡಲು ನಡೆಸುತ್ತಿರುವ ಎಲ್ಲ ಹುನ್ನಾರಗಳನ್ನು ಭಾರತದ ಜನರೆಲ್ಲರೂ ಒಂದಾಗಿ ಒಕ್ಕೊರಳಿನಿಂದ ವಿಫಲಗೊಳಿಸಬೇಕು ಎಂದು ಒತ್ತಾಯಿಸಲಾಯಿತು.