ಇರಾನ್: ವಿಮಾನಕ್ಕೆ ಕ್ಷಿಪಣಿ ಬಡಿಯುವ ವೀಡಿಯೊ ಹಾಕಿದಾತನ ಬಂಧನ

Update: 2020-01-15 17:12 GMT

ಟೆಹರಾನ್, ಜ. 15: ಯುಕ್ರೇನ್ ಪ್ರಯಾಣಿಕ ವಿಮಾನವೊಂದನ್ನು ಕ್ಷಿಪಣಿಯು ಹೊಡೆದುರುಳಿಸುವ ದೃಶ್ಯವನ್ನು ಚಿತ್ರೀಕರಿಸಿದ್ದ ವ್ಯಕ್ತಿಯನ್ನು ಬಂಧಿಸಿರುವುದಾಗಿ ಇರಾನ್ ಹೇಳಿದೆ.

ಬಂಧಿತ ವ್ಯಕ್ತಿಯ ವಿರುದ್ಧ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಆರೋಪಗಳನ್ನು ಹೊರಿಸಲಾಗುವುದು ಎಂದು ಭಾವಿಸಲಾಗಿದೆ.

ಕಳೆದ ವಾರದ ಬುಧವಾರ ಟೆಹರಾನ್ ವಿಮಾನ ನಿಲ್ದಾಣದಿಂದ ಯುಕ್ರೇನ್ ರಾಜಧಾನಿ ಕೀವ್‌ಗೆ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳ ಬಳಿಕ ಯುಕ್ರೇನ್ ಏರ್‌ಲೈನ್ಸ್‌ಗೆ ಸೇರಿದ ಪಿಎಸ್752 ವಿಮಾನವನ್ನು ಕ್ಷಿಪಣಿಯೊಂದು ಹೊಡೆದುರುಳಿಸಿತು. ಆ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲ 176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಮಾನವನ್ನು ತಪ್ಪಾಗಿ ಹೊಡೆದುರುಳಿಸಲಾಯಿತು ಎಂದು ಇರಾನ್ ಬಳಿಕ ಹೇಳಿದೆ ಹಾಗೂ ಘಟನೆಗೆ ಸಂಬಂಧಿಸಿ ಹಲವರನ್ನು ಬಂಧಿಸಲಾಗಿದೆ ಎಂದಿದೆ.

ಘಟನೆಯ ಬಗ್ಗೆ ನನ್ನ ದೇಶ ನಡೆಸುತ್ತಿರುವ ವಿಚಾರಣೆಯ ಮೇಲುಸ್ತುವಾರಿಯನ್ನು ‘ವಿಶೇಷ ನ್ಯಾಯಾಲಯ’ವೊಂದು ವಹಿಸಲಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ.

ವಿಮಾನವನ್ನು ತನ್ನ ಕ್ಷಿಪಣಿಯೊಂದು ಹೊಡೆದುರುಳಿಸಿತು ಎನ್ನುವುದನ್ನು ಇರಾನ್ ಆರಂಭದಲ್ಲಿ ನಿರಾಕರಿಸಿತ್ತು. ಆದರೆ, ವಿಮಾನಕ್ಕೆ ಕ್ಷಿಪಣಿ ಅಪ್ಪಳಿಸುವುದನ್ನು ತೋರಿಸುವ ಹೊಸ ಹೊಸ ವೀಡಿಯೊಗಳು ಹೊರಬಂದ ಬಳಿಕ ಅನಿವಾರ್ಯವಾಗಿ ತನ್ನ ಪ್ರಮಾದವನ್ನು ಒಪ್ಪಿಕೊಂಡಿದೆ.

ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರಗೊಂಡ ಬಳಿಕ, ವಿಮಾನಕ್ಕೆ ಕ್ಷಿಪಣಿಯೊಂದು ಬಡಿದಿದೆ ಎನ್ನುವುದನ್ನು ಈ ವೀಡಿಯೊ ತೋರಿಸಿದೆ ಎಂದು ವಿಶ್ಲೇಷಕರು ಬೆಟ್ಟುಮಾಡಿದ್ದಾರೆ.

ವಿಮಾನವನ್ನು ಹೊಡೆದುರುಳಿಸಿದ ಹೊಣೆಯನ್ನು ಇರಾನ್‌ನ ಅತ್ಯುನ್ನತ ಸೇನಾ ಘಟಕ ರೆವಲೂಶನರಿ ಗಾರ್ಡ್ಸ್ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News