ವಿಮಾನದ ಬ್ಲ್ಯಾಕ್‌ ಬಾಕ್ಸ್ ಮರಳಿಸಲು ಇರಾನ್‌ಗೆ ಯುಕ್ರೇನ್ ಮನವಿ

Update: 2020-01-15 17:32 GMT

ಕೀವ್ (ಯುಕ್ರೇನ್), ಜ. 15: ಇರಾನ್ ಕ್ಷಿಪಣಿಗಳಿಂದ ಹೊಡೆದುರುಳಿಸಲ್ಪಟ್ಟಿರುವ ಯುಕ್ರೇನ್ ಏರ್‌ಲೈನ್ಸ್ ವಿಮಾನದ ಬ್ಲಾಕ್‌ಬಾಕ್ಸ್ ಫ್ಲೈಟ್ ರೆಕಾರ್ಡರ್‌ಗಳನ್ನು ಹಸ್ತಾಂತರಿಸುವಂತೆ ಯುಕ್ರೇನ್ ಇರಾನ್‌ಗೆ ಮನವಿ ಮಾಡಿದೆ.

ಬ್ಲಾಕ್‌ಬಾಕ್ಸ್‌ಗಳನ್ನು ಸರಿಯಾದ ರೀತಿಯಲ್ಲಿ ಬಿಡಿಸಲು ಹಾಗೂ ಅಪಘಾತದ ತನಿಖೆಯಲ್ಲಿ ಪುರಾವೆಯಾಗಿ ಬಳಸುವುದಕ್ಕಾಗಿ ಸಂರಕ್ಷಿಸಿಡಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಯುಕ್ರೇನ್ ಜನರಲ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಜನವರಿ 8ರಂದು ಯುಕ್ರೇನ್ ರಾಜಧಾನಿ ಕೀವ್‌ಗೆ ಹೊರಡಲು ಇರಾನ್ ರಾಜಧಾನಿ ಟೆಹರಾನ್‌ನಿಂದ ಹಾರಾಟ ಆರಂಭಿಸಿದ ಸ್ವಲ್ಪವೇ ಹೊತ್ತಿನಲ್ಲಿ ವಿಮಾನವು ಟೆಹರಾನ್ ಹೊರವಲಯದ ಗದ್ದೆಯೊಂದಕ್ಕೆ ಅಪ್ಪಳಿಸಿತ್ತು. ಅದರಲ್ಲಿದ್ದ ಎಲ್ಲ 176 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಯಾಣಿಕ ವಿಮಾನವನ್ನು ತನ್ನ ಸೇನೆಯೇ ತಪ್ಪಾಗಿ ಹೊಡೆದುರುಳಿಸಿದೆ ಎಂದು ಹಲವು ದಿನಗಳ ಬಳಿಕ ಇರಾನ್ ತಪ್ಪೊಪ್ಪಿಕೊಂಡಿದೆ.

ಯುಕ್ರೇನ್ ಅಂತರ್‌ರಾಷ್ಟ್ರೀಯ ಏರ್‌ಲೈನ್ಸ್‌ಗೆ ಸೇರಿದ ಬೋಯಿಂಗ್ 737 ವಿಮಾನದ ಹಾರಾಟ ದಾಖಲೆಗಳನ್ನು ಯುಕ್ರೇನ್ ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ಹಸ್ತಾಂತರಿಸುವುದಕ್ಕಾಗಿ ಕಾನೂನು ನೆರವು ಕೋರಿ ಯುಕ್ರೇನ್ ಮನವಿಯೊಂದನ್ನು ಕಳುಹಿಸಿದೆ ಎಂದು ಯುಕ್ರೇನ್ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News