×
Ad

ತುಳು ಬಾಸೆಗ್ ತಿಕ್ಕೊಡಾಯಿನ ಮಾನಾದಿಗೆ ತಿಕ್ಕ್ ದಿಜಿ: ಅನನ್ಯಾ ಜೀವನ್

Update: 2020-01-16 16:55 IST

ಮಂಗಳೂರು, ಜ.16: ‘‘ತುಳು ಬಾಸೆಗ್ ತಿಕ್ಕೊಡಾಯಿನ ಮಾನಾದಿಗೆ ನನಲಾ ತಿಕ್ಕ್್ಕದಿಜಿ ಪಂಡ್‌ದ್ ಬಾರಿ ಬೇಜಾರ್‌ಡ್ ಪನೊಡಾಪುಂಡು (ತುಳು ಭಾಷೆಗೆ ಸಿಗಬೇಕಾದ ಸ್ಥಾನಮಾನ ಇನ್ನೂ ಸಿಕ್ಕಿಲ್ಲಾ ಎನ್ನುವುದನ್ನು ಬೇಸರದಲ್ಲಿ ಹೇಳಬೇಕಾಗಿದೆ)’’ ಎಂದು ವಿದ್ಯಾರ್ಥಿನಿ ಅನನ್ಯಾ ಜೀವನ್ ಉಳ್ಳಾಲ್ ಹೇಳಿದ್ದಾರೆ.

ಮಂಗಳೂರು ತುಳು ಪರಿಷತ್, ಮಂಗಳೂರು ವಿಶ್ವ ವಿದ್ಯಾನಿಲಯ ಮತ್ತು ಮ್ಯಾಪ್ಸ್ ಕಾಲೇಜು ಸಂಯುಕ್ತಾಶ್ರಯದಲ್ಲಿ ನಗರದ ಪುರಭವನದ ಏರ್ಯ ಲಕ್ಷ್ಮೀನಾರಾಯಣ ಆಳ್ವ ವೇದಿಕೆಯಲ್ಲಿ ಗುರುವಾರ ಆಯೋಜಿಸಿದ್ದ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿ ಸೇರಿಸಬೇಕೆಂಬ ತುಳುನಾಡಿನ ಹಳ್ಳಿಗಳಿಂದ ಕೇಳಿ ಬರುತ್ತಿರುವ ಕೂಗು ಇನ್ನೂ ದಿಲ್ಲಿಯನ್ನು ತಲುಪಿಲ್ಲ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳುವಿಗೆ ಸುದೀರ್ಘವಾದ ಇತಿಹಾಸವಿದ್ದರೂ ಸೂಕ್ತ ಮನ್ನಣೆ ದೊರೆಯದೆ ಇರುವುದು ವಿಷಾದನೀಯ ಎಂದವರು ಖೇದ ವ್ಯಕ್ತಪಡಿಸಿದರು.

ತುಳುನಾಡಿನಲ್ಲಿ ಸೌಹಾರ್ದ ಸಾರುವ ಸಾಕಷ್ಟು ಪ್ರದೇಶಗಳಿವೆ. ತುಳುನಾಡಿನಲ್ಲಿ ಜಾತಿ, ಧರ್ಮದ ಹೊರತಾಗಿಯೂ ಹಿಂದೂ, ಮುಸ್ಲಿಂ, ಕ್ರೈಸ್ತರು, ಬೌದ್ಧ, ಜೈನರನ್ನು ತುಳು ಭಾಷೆ ಒಂದುಗೂಡಿಸಿದೆ.ತುಳುವರ ಭಾಷೆಯ ಜೊತೆಗೆ ಸಂಸ್ಕೃತಿಯೂ ಸೇರಿಕೊಂಡಿದೆ.ತುಳುನಾಡಿನ ಜಾನಪದ ಆಚರಣೆಗಳಲ್ಲಿ ತುಳುವರ ಸಂಸ್ಕೃತಿ ಅಡಗಿದೆ ಎಂದು ಅನನ್ಯಾ ತಿಳಿಸಿದ್ದಾರೆ.

ಸುಮಾರು 70 ವರ್ಷಗಳ ಹಿಂದೆ ಯು.ಎಸ್.ಪಣಿಯಾಡಿ ಪ್ರತ್ಯೇಕ ತುಳು ರಾಜ್ಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಸದ್ಯ ಪ್ರತ್ಯೇಕ ರಾಜ್ಯ ಅಲ್ಲದೆ ಇದ್ದರೂ ತುಳುವಿಗೆ ಸೂಕ್ತ ಸ್ಥಾನಮಾನ ದೊರೆಯಬೇಕಾಗಿತ್ತು. ತುಳು ಭಾಷೆಯ ಬೆಳವಣಿಗಾಗಿ ಹುಟ್ಟಿಕೊಂಡ ತುಳು ಸಾಹಿತ್ಯ ಅಕಾಡಮಿ ಸರಕಾರದ ಅಂಗ ಸಂಸ್ಥೆಯಾಗಿರುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದರು.

* ತುಳು ವಿಶ್ವವಿದ್ಯಾನಿಲಯ: ದೂರದ ಆಂಧ್ರದ ಕುಪ್ಪಂ ವಿಶ್ವ ವಿದ್ಯಾನಿಲಯದಲ್ಲಿ ತುಳು ಅಧ್ಯಯನ ಪೀಠ ರಚನೆಯಾಗಿರುವಾಗ ತುಳುನಾಡಿನಲ್ಲಿ ತುಳು ವಿಶ್ವವಿದ್ಯಾನಿಲಯ ರಚನೆಯಾಗಬೇಡವೆ ಎಂದು ಅನನ್ಯಾ ಪ್ರಶ್ನಿಸಿದರು.

ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಪಿಎಸ್.ಯಡಪಡಿತ್ತಾಯ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ಸಾಮೂಹಿಕ ಪ್ರಯತ್ನ ಆಗಬೇಕಾಗಿದೆ. ಕಿರಿಯರಲ್ಲಿ ತುಳು ಭಾಷೆಯ ಬಗ್ಗೆ ಅಭಿಮಾನ ಮೂಡಿಸಬೇಕಾಗಿದೆ, ತುಳು ಭಾಷೆಯ ಚರಿತ್ರೆಯನ್ನು ತಿಳಿಸಬೇಕಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ತುಳು ಭಾಷೆಯ ಬೆಳವಣಿಗೆಗೆ ಪ್ರೋತ್ಸಾಹ ಕೊಡುಗೆ ನೀಡುತ್ತಿದೆ ಎಂದರು.

ಹಿರಿಯ ಜನಪದ ವಿದ್ವಾಂಸ ಮತ್ತು ಜಾನಪದ ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಚಿನ್ನಪ್ಪ ಮಾತನಾಡಿ, ತುಳು ಭಾಷೆಯ ಬೆಳವಣಿಗೆಗೆ ಸಾಂಸ್ಥಿಕ ಬೆಂಬಲ ಅಗತ್ಯ ಎಂದರು.

 ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಹರ್ಷಿತ್ ಕೆ., ತುಳು ನಾಡಿನ ಸಂಸ್ಕೃತಿ, ಇತಿಹಾಸ, ತುಳುವರ ಪರಂಪರೆಯ ವೌಲ್ಯಗಳು ಉಳಿಯಬೇಕಾದರೆ ತುಳು ಭಾಷೆಯ ಬೆಳವಣಿಗೆ ಆಗಬೇಕು ಎಂದರು.

ಸಮಾರಂಭದಲ್ಲಿ ಸಮ್ಮೇಳನ ಸಮಿತಿಯ ಪದಾಧಿಕಾರಿಗಳಾದ ಪ್ರಭಾಕರ ನೀರು ಮಾರ್ಗ, ಮಮತಾ ಗಟ್ಟಿ, ಧರಣೇಂದ್ರ ಕುಮಾರ್, ಶಿವಾನಂದ ಕರ್ಕೆರ, ದಿನೇಶ್ ಆಳ್ವ, ಶುಭೋದಯಾ ಆಳ್ವ, ಮಾಜಿ ಸಚಿವ ಬಿ.ರಮಾನಾಥ ರೈ ಮತ್ತಿತರರು ಉಪಸ್ಥಿತರಿದ್ದರು.

ತಾರನಾಥ ಗಟ್ಟಿ ಕಾಪಿಕಾಡ್ ಸ್ವಾಗತಿಸಿದರು. ಆಶಿಶ್ ಶೆಟ್ಟಿ ಚಿತ್ರಕಲಾ ಸ್ಪರ್ಧೆಯನ್ನು ಉದ್ಘಾಟಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News