ಕೇಂದ್ರ ಸಚಿವ ಅಮಿತ್ ಶಾಗೆ ಐವನ್ ಡಿಸೋಜಾರಿಂದ 4 ಪ್ರಶ್ನೆಗಳು !
ಮಂಗಳೂರು, ಜ.16: ಎನ್‌ಆರ್‌ಸಿ ಕುರಿತಂತೆ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತದ್ವಿರುದ್ಧ ಹೇಳಿಕೆ ನೀಡಿರುವುದರ ಕುರಿತು ಸ್ಪಷ್ಟೀಕರಣ ನೀಡಬೇಕು ಇಲ್ಲವೇ ಕ್ಷಮೆಯಾಚಿಸಬೇಕು ಎಂಬ ಆಗ್ರಹದೊಂದಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಕೇಂದ್ರ ಸಚಿವ ಅಮಿತ್ ಶಾ ತಮ್ಮ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಮಂಗಳೂರಿಗೆ ಅಮಿತ್ ಶಾ ಬರುವುದರ ವಿರುದ್ಧ ಗೋ ಬ್ಯಾಕ್ ಎಂಬ ಕಾರಣಕ್ಕೋ ಅಥವಾ ಅವರಿಗೆ ಸಮಯ ಹೊಂದಿಕೆ ಆಗಿಲ್ಲ ಎಂಬ ಕಾರಣಕ್ಕೋ ಅವರ ಮಂಗಳೂರು ಪ್ರವಾಸ ಸದ್ಯರದ್ದಾಗಿದೆ. ಇದೀಗ ರಾಜ್ಯಕ್ಕೆ ಜ.17- 18ರಂದು ಭೇಟಿ ನೀಡಲಿರುವ ಅವರು ತಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ದೇಶದ ಎಲ್ಲಾ ರಾಜ್ಯಗಳಲ್ಲಿ ಎನ್‌ಆರ್‌ಸಿ ಅನುಷ್ಠಾನಗೊಳಿಸಲು ಇನ್ನೂ ನಿರ್ಧರಿಸಿಲ್ಲ ಎಂದು ಹೇಳಿದ್ದರೆ, ಅಮಿತ್ ಶಾ ಅನುಷ್ಠಾನಗೊಳಿಸುವುದರಲ್ಲಿ ಒಂದಿಂಚೂ ಹಿಂದೆ ಸರಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಪ್ರಸಕ್ತ ಪರಿಸ್ಥಿತಿಗೆ ಕಾರಣರಾಗಿದ್ದಾರೆ. ಈ ಬಗ್ಗೆ ಅವರು ದೇಶದ ಜನರಲ್ಲಿ ಕ್ಷಮೆಯಾಚಿಸ ಬೇಕು ಅಥವಾ ಪ್ರಧಾನ ಮಂತ್ರಿ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದರು.
ಇದೇ ವೇಳೆ ಮಹಾದಾಯಿ ವಿಚಾರದಲ್ಲಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರನ್ನು ಮನೆಗೆ ಕರೆಯಿಸಿ ವಿಚಾರ ಬಗೆಹರಿಸುವ ಚುನಾವಣಾ ಗಿಮಿಕ್ ಮಾಡಿದ್ದೀರಿ. ಈಗ ಆ ಬಗ್ಗೆ ಕೈಗೊಂಡಿರುವ ಕ್ರಮ ಏನು ತಿಳಿಸಿ?
ಕಳೆದ ಬಾರಿ ರಾಜ್ಯಕ್ಕೆ ಭೇಟಿ ನೀಡಿದಾಗ 3 ಲಕ್ಷ ಕೋಟಿ ರೂ. ಕೇಂದ್ರ ಸರಕಾರ ಅನುದಾನ ನೀಡಿದ್ದು, ಅದನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ತಲುಪಿಸಿಲ್ಲ ಎಂದು ಹೇಳಿದ್ದೀರಿ. ಈಗ ನಿಮ್ಮ ಸ್ವ ಪಕ್ಷದ ಸರಕಾರವಿದ್ದು ಯಾರಿಗೆ ಎಷ್ಟು ತಲುಪಿದೆ ಎಂಬ ಬಗ್ಗೆ ಶ್ವೇತ ಪತ್ರ ಹೊರಡಿಸಿ ಹಾಗೂ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಸಂಭವಿಸಿರುವ ನೆರೆಯಿಂದ 35 ಸಾವಿರ ಕೋಟಿ ರೂ. ನಷ್ಟದ ವರದಿಯನ್ನು ರಾಜ್ಯ ಮತ್ತು ಕೇಂದ್ರಕ್ಕೆ ವೀಕ್ಷಕರು ನೀಡಿದ್ದು, ಈವರೆಗೆ ಕೇವಲ 1800 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, ರಾಜ್ಯಕ್ಕೆ ಮಲತಾಯಿ ಧೋರಣೆ ಯಾಕೆ ಎಂದು ಉತ್ತರಿಸಿ ಎಂದು ಅವರು ಪ್ರಶ್ನಿಸಿದ್ದಾರೆ.
ಸರಕಾರ ಕಣ್ತೆರೆಯಲು ಸೂಕ್ತ ಸಮಯ
ಎನ್‌ಆರ್‌ಸಿ, ಸಿಸಿಎ ವಿರುದ್ಧ ಮಂಗಳೂರಿನಲ್ಲಿ ನಿನ್ನೆ ನಡೆದ ಪ್ರತಿಭಟನೆಯಿಂದ ಸರಕಾರ ಕಣ್ತೆರೆಯಲು ಸೂಕ್ತ ಸಮಯ ಎಂದು ಹೇಳಿದ ಐವನ್ ಡಿಸೋಜಾ, ಶಾಂತಯುತವಾಗಿ ನಡೆಯುವಲ್ಲಿ ಪೊಲೀಸರ ಮುನ್ನೆಚ್ಚರಿಕಾ ಕ್ರಮವೂ ಅಭಿನಂದನಾರ್ಹ ಎಂದರು.
ಈ ಸಂದರ್ಭ ಅವರು ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಮ್ಮ ಶಿಫಾರಸಿನ ಮೇರೆಗೆ 26 ಮಂದಿ ಅರ್ಜಿದಾರರಿಗೆ ಬಿಡುಗಡೆಯಾದ ಒಟ್ಟು 13,11,353 ರೂ.ಗಳ ಪರಿಹಾರ ಧನದ ಚೆಕ್ ಅನ್ನು ಫಲಾನುಭವಿಗಳಿಗೆ ವಿತರಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ಸಂವಿಧಾನ ಓದುವುದು ಒಳಿತು !
ಕಪಾಳಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸಿ ಕನಕಪುರದಲ್ಲಿ ಮಾನತಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಸಮುದಾಯಕ್ಕೆ ನೋವಾಗುವಂತೆ ನಡೆದುಕೊಂಡಿದ್ದಾರೆ. ದೇವರಿಗೆ ಯಾವ ಜಾಗವೂ ಬೇಕಾಗಿಲ್ಲ. ಆದರೆ ರಾಜಕೀಯ ಪ್ರೇರಿತವಾಗಿ ಅವರು ನೀಡಿರುವ ಹೇಳಿಕೆ ಪ್ರಪಂಚಾದ್ಯಂತ ಇರುವ ಸಮುದಾಯದ ಜನರಿಗೆ ಮಾನಸಿಕ ವೇದನೆಯನ್ನು ನೀಡಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದ್ದಾರೆ.
ಕಪಾಳಬೆಟ್ಟದಲ್ಲಿ ಯೇಸು ಕ್ರಿಸ್ತನ ಪ್ರತಿಮೆ ಸ್ಥಾಪನೆ ಅಕ್ರಮ ಎಂದಾದರೆ ಆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪರರ ಮನೆಯ ಎದುರಲ್ಲೋ ಅಥವಾ ವಿಧಾನಸಭೆಯ ಎದುರೋ ಪ್ರತಿಭಟಿಸಬಹುದಿತ್ತು. ಆದರೆ ಈ ರೀತಿ ರಾಜಕೀಯ ಮಾಡಿ ಗೊಂದಲ ಸೃಷ್ಟಿಸಿ ಜನರ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಕಾರ್ಯ ಸಂವಿಧಾನ ವಿರೋಧಿ ಎಂದು ಅವರು ಹೇಳಿದರು.