ಬೈಕಂಪಾಡಿಯಲ್ಲಿ ಅಪಘಾತ: ಎನ್‌ಎಂಪಿಟಿ ನಿವೃತ್ತ ಉದ್ಯೋಗಿ ಮೃತ್ಯು
ಮಂಗಳೂರು, ಜ.16: ರಾ.ಹೆ 66ರ ಬೈಕಂಪಾಡಿಯಲ್ಲಿ ಗುರುವಾರ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಎನ್‌ಎಂಪಿಟಿ ನಿವೃತ್ತ ಉದ್ಯೋಗಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಸುಂದರ ಸಾಲ್ಯಾನ್ (70) ಮೃತಪಟ್ಟವರು.
ಇವರು ಪಣಂಬೂರು ನವ ಮಂಗಳೂರು ಬಂದರು ಮಂಡಳಿಯ ಮೆರೈನ್ ಭಾಗದಲ್ಲಿ ಅಪರೇಟರ್ ಆಗಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದರು. ಬೈಂಕಪಾಡಿಯಿಂದ ಕೃಷ್ಣಾಪುರದ ತನ್ನ ಮನೆಗೆ ತೆರಳಲು ಬಸ್ ಕಾಯುತ್ತಿದ್ದ ಸಂದರ್ಭ ಕೃಷ್ಣಾಪುರದತ್ತ ಚಲಿಸುತ್ತಿದ್ದ ಸಿಟಿ ಬಸ್ ಢಿಕ್ಕಿ ಹೊಡೆಯಿತು. ಇದರಿಂದ ಸುಂದರ ಸಾಲ್ಯಾನ್ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ತಿಳಿದುಬಂದಿದೆ.
ಬಸ್ಸಿನ ಚಾಲಕ ಅತ್ಯಂತ ವೇಗವಾಗಿ ಚಲಾಯಿಸಿಕೊಂಡು ಬಂದು ಬಸ್ ಕಾಯುತ್ತಿದ್ದ ಸುಂದರ ಸಾಲ್ಯಾನ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸಾಲ್ಯಾನ್‌ರನ್ನು ಸುಮಾರು ದೂರಕ್ಕೆ ಎಳೆದುಕೊಂಡು ಹೋಗಿತ್ತು. ಇದರಿಂದ ಗಂಭೀರ ಗಾಯಗೊಂಡ ಸಾಲ್ಯಾನ್ ಸ್ಥಳದಲ್ಲಿಯೇ ಮೃತಪಟ್ಟರು ಎಂದು ದೂರಲಾಗಿದೆ.
ಮೃತ ಸುಂದರ ಸಾಲ್ಯಾನ್ ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಈ ಬಗ್ಗೆ ಮಂಗಳೂರು ಸಂಚಾರ ಉತ್ತರ (ಬೈಕಂಪಾಡಿ)ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.