ಮಂಗಳೂರು-ಬೇಪೂರ್ನಿಂದ ಹೊರಟ ಎರಡು ನೌಕೆ ಅವಘಡ; 12 ಮಂದಿ ಕಾರ್ಮಿಕರ ರಕ್ಷಣೆ
ಮಂಗಳೂರು, ಜ.16: ಮಂಗಳೂರಿನ ಬಂದರು ಮತ್ತು ಕೇರಳದ ಬೇಪೂರ್ ನಿಂದ ಲಕ್ಷದ್ವೀಪದ ಕಡೆಗೆ ಹೊರಟ ಸರಕು ಸಾಗಣೆಯ ಎರಡು ನೌಕೆಯು ಪ್ರತ್ಯೇಕ ಘಟನೆಯಲ್ಲಿ ಅವಘಡಕ್ಕೀಡಾದ ಘಟನೆ ಗುರುವಾರ ನಡೆದಿದೆ. ಈ ನೌಕೆಯಲ್ಲಿದ್ದ 12 ಮಂದಿ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಕೇರಳದ ಕಲ್ಲಿಕೋಟೆಯಿಂದ ಸುಮಾರು 12 ಕಿ.ಮೀ. ದೂರದ ಬೇಪೂರ್ ಬಂದರ್‌ನಿಂದ ಬುಧವಾರ ಬೆಳಗ್ಗೆ 10:30ಕ್ಕೆ ‘ತಾಲುಂ ಒನ್ನು’ ಎಂಬ ಹೆಸರಿನ ನೌಕೆಯು ಜಲ್ಲಿ, ಹೊಗೆ, ಕಲ್ಲು ಮತ್ತಿತರ ಸಾಮಗ್ರಿಗಳನ್ನು ಹೇರಿಕೊಂಡು ಅಂದ್ರೋತ್ ದ್ವೀಪಕ್ಕೆ ಹೊರಟಿತ್ತು. ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಈ ನೌಕೆಯು ಬೇಕೂರಿನಿಂದ ಸುಮಾರು 100 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಯಿತು ಎನ್ನಲಾಗಿದೆ.
ತಕ್ಷಣ ಅದರ ಹಿಂದೆಯೇ ಇದ್ದ ಇನ್ನೊಂದು ನೌಕೆಯಲ್ಲಿದ್ದವರು ‘ಸಾಲಂ’ ನೌಕೆಯಲ್ಲಿದ್ದ ತಮಿಳುನಾಡು ಮೂಲದ 7 ಮಂದಿ ಕಾರ್ಮಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ತಲುಪಿಸುವಲ್ಲಿ ಸಹಕರಿಸಿದರು. ನೌಕೆಯಲ್ಲಿದ್ದ ಸರಕುಗಳು ಕಡಲು ಪಾಲಾಗಿದ್ದು, ಸುಮಾರು 1.50 ಕೊ.ರೂ. ನಷ್ಟವಾಗಿದೆ ಎಂದು ಮಂಗಳೂರಿನ ಓಲ್ಡ್‌ಪೋರ್ಟ್ ಯೂಸರ್ಸ್ ಅಸೋಸಿಯೇಶನ್‌ನ ಕಾರ್ಯದರ್ಶಿ ಅಬ್ದುಲ್ಲತೀಫ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.
ಮಂಗಳೂರು ಹಳೆ ಬಂದರ್‌ನಿಂದ ಬುಧವಾರ ಕಿಲ್ತಾನ್ ದ್ವೀಪಕ್ಕೆ ಹೊರಟ ಸರಕು ಸಾಗಾಟದ ಇನ್ನೊಂದು ನೌಕೆ ಗುರುವಾರ ಅಪರಾಹ್ನ 2:30ಕ್ಕೆ ದಡ ಸಮೀಪಿಸುತ್ತಿದ್ದ ವೇಳೆ ಬಿರುಗಾಳಿಯ ರಭಸಕ್ಕೆ ವಾಲಿತು ಎನ್ನಲಾಗಿದೆ. ನೀರು ಒಳ ನುಗ್ಗುವ ಅಪಾಯದ ಮುನ್ಸೂಚನೆ ಅರಿತ ದಡದಲ್ಲಿದ್ದ ಸುಮಾರು 200ಕ್ಕೂ ಅಧಿಕ ಮಂದಿ ನೌಕೆಯಲ್ಲಿದ್ದ 5 ಮಂದಿ ಕಾರ್ಮಿಕರನ್ನು ರಕ್ಷಿಸಿದರು ಎನ್ನಲಾಗಿದೆ.