ಕಲ್ಯಾಣಪುರ: ಜ.19ಕ್ಕೆ ಸಮುದಾಯೋತ್ಸವ-2020
ಉಡುಪಿ, ಜ.16: ಕೆಥೊಲಿಕ್ ಉಡುಪಿ ಪ್ರದೇಶ್ ವತಿಯಿಂದ ಉಡುಪಿ ಧರ್ಮಪ್ರಾಂತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಇದೇ ಜ.19ರ ರವಿವಾರ ಕಲ್ಯಾಣಪುರ ವೌಂಟ್ ರೋಸರಿ ಚರ್ಚ್ ಮೈದಾನದಲ್ಲಿ ಉಡುಪಿ ಧರ್ಮಪ್ರಾಂತ ಮಟ್ಟದ ಚಾರಿತ್ರಿಕ ಸಮ್ಮೇಳನ ‘ಸಮುದಾಯೋತ್ಸವ-2020’ ನಡೆಯಲಿದೆ.
ಸಮಾವೇಶವನ್ನು ಬೆಳಗ್ಗೆ 9:30ಕ್ಕೆ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉತ್ತರಾಖಂಡ್‌ನ ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಭಾಗವಹಿಸಲಿದ್ದಾರೆ. ಕ್ರೈಸ್ತ ಸಮಾಜದ ಪ್ರಸ್ತುತ ಪರಿಸ್ಥಿತಿ ಹಾಗೂ ಭವಿಷ್ಯದ ದೃಷ್ಟಿಕೋನ ಎಂಬ ವಿಷಯದ ಕುರಿತು ಮಾಜಿ ಶಾಸಕ ಹಾಗೂ ನಿವೃತ್ತ ಕೆಎಎಸ್ ಅಧಿಕಾರಿ ಜೆ.ಆರ್.ಲೋಬೊ ಪ್ರಧಾನ ಭಾಷಣ ಮಾಡಲಿದ್ದಾರೆ.
ಸಮಾವೇಶದಲ್ಲಿ ಬೆಂಗಳೂರು ಮಹಾಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಅ.ವಂ. ಡಾ.ಪೀಟರ್ ಮಚಾದೊ, ಮಂಗಳೂರಿನ ಧರ್ಮಾಧ್ಯಕ್ಷ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ, ನಿವೃತ್ತ ಕೆಎಎಸ್ ಅದಿಕಾರಿ ಆ್ಯಂಟನಿ ಮೆಂಡೊನ್ಸಾ, ಹಿರಿಯ ಪತ್ರಕರ್ತ ಗೇಬ್ರಿಯಲ್ ವಾಝ್, ಮಹಾರಾಷ್ಟ್ರದ ಹಿರಿಯ ರಾಜಕೀಯ ನಾಯಕಿ ಜಾನೆಟ್ ಡಿಸೋಜ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ, ಕ್ರಸ್ತೇ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೊಯ್ಲಸ್ ಡಿಸೋಜ, ಎಂ.ಸಿ.ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಸೇರಿದಂತೆ ಹಲವು ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.