ಬೈಕಾಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಘಟಕ: ಗ್ರಾಮಸ್ಥರ ವಿರೋಧ

Update: 2020-01-16 14:33 GMT

ಬ್ರಹ್ಮಾವರ, ಜ.16: ಕೃಷಿಕ ಸಂಘ ಬ್ರಹ್ಮಾವರ ವಲಯ ಸಮಿತಿ ಹಾಗೂ ಬೈಕಾಡಿ ಗ್ರಾಮ ಸಮಿತಿ ಬೈಕಾಡಿ ಇವರ ಜಂಟಿ ಆಶ್ರಯದಲ್ಲಿ ಬೈಕಾಡಿಯ ಶ್ರೀಕಾಮೇಶ್ವರ ದೇವಸ್ಥಾನ ವಠಾರದಲ್ಲಿ ಆಯೋಜಿಸಲಾಗಿದ್ದ ಘನ ತ್ಯಾಜ್ಯ ಘಟಕ ಸ್ಥಾಪನೆ ಸಾಧಕ-ಬಾಧಕ ಸಮಾಲೋಚನಾ ಸಭೆಯಲ್ಲಿ ಸೇರಿದ್ದ ಹಾರಾಡಿ-ಬೈಕಾಡಿಯ ಗ್ರಾಮಸ್ಥರು, ಜನತೆಯ ಅಹವಾಲುಗಳನ್ನು ಆಲಿಸದೇ ಆರಂಭಿಸಲು ಹೊರಟಿರುವ ತ್ಯಾಜ್ಯ ಘಟಕವನ್ನು ಗ್ರಾಮದಲ್ಲಿ ಹೇರಲು ಅವಕಾಶ ನೀಬಾರದೆಂದು ನಿರ್ಣಯ ಕೈಗೊಂಡರು.

ಸ್ಥಳೀಯ ಜನಪ್ರತಿನಿಧಿಗಳು ಸಹಿತ ಗ್ರಾಮಸ್ಥರನ್ನು ಕತ್ತಲಲ್ಲಿಟ್ಟು ವಾರ್ಡ್ ಅಥವಾ ಗ್ರಾಮಸಭೆಯಲ್ಲಿ ವಿಷಯ ಮಂಡನೆ, ಚರ್ಚೆ ಆಗದೆ, ಹಾರಾಡಿ- ಬೈಕಾಡಿ ಗ್ರಾಪಂ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತರಾತುರಿಯಲ್ಲಿ ಬೈಕಾಡಿಯಲ್ಲಿ ಕೃಷಿಕರ ಕುಮ್ಕಿ ಜಮೀನಿನಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗಾಗಿ ಸುಳ್ಳು ಮಾಹಿತಿಗಳೊಂದಿಗೆ ನಿರಾಕ್ಷೇಪಣಾ ಪತ್ರ ನೀಡಿದ್ದಾರೆ ಎಂದು ಸಭೆಯಲ್ಲಿ ಆರೋಪಿಸಲಾಯಿತು.

ನಿಲ್ಲಲು ಸೂರಿಲ್ಲದ ಗ್ರಾಮದ ಮಂದಿಗೆ ಕೇವಲ 2-3 ಸೆಂಟ್ಸ್ ನೀಡಲು ಕೂಡಾ ಇರದ ಜಮೀನು, ಊರ ಮಧ್ಯೆ ಜನವಸತಿ ಪ್ರದೇಶದಲ್ಲಿ ಇಂತಹ ಘಟಕಗಳಿಗೆ ಎಕರೆಗಟ್ಟಲೆ ಅದು ಹೇಗೆ ಬರುತ್ತದೆ? ಜನರಿಗೆ ಅಗತ್ಯವಾಗಿ ಬೇಕಿರುವ ಯೋಜನೆಗಳು ನೆನೆಗುದಿಗೆ ಬೀಳುತ್ತಿವೆ. ಆದರೆ ಸಮಸ್ಯೆ ಒಡ್ಡುವ ಯೋಜನೆಗಳು ತರಾತುರಿಯಲ್ಲಿ ಕಾರ್ಯಚರಣೆಗೆ ಬರುತ್ತಿವೆ. ಗ್ರಾಮಕ್ಕೆ ಬಾಧೆಯೊಡ್ಡುವ ಇಂಥ ಘಟಕ ಬೈಕಾಡಿಗೆ ಬೇಡ ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ತೀರ್ಮಾನಿಸಿದರು.

ಜಿಲ್ಲಾ ಕೃಷಿಕ ಸಂಘ ಬೈಕಾಡಿ ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೃಷಿಕ ಸಂಘದ ಜಿಲ್ಲಾ ಪದಾಧಿಕಾರಿಗಳಾದ ಶ್ರೀನಿವಾಸ ಟ್ ಕುದಿ, ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ, ರವೀಂದ್ರ ಗುಜ್ಜರಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಶ್ರೀಕಾಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರೀಶ್ ಹೊಳ್ಳ, ಗ್ರಾಪಂ ಸದಸ್ಯ ಚಂದ್ರಶೇಖರ್ ಶೆಟ್ಟಿ ಹಾರಾಡಿ, ಪ್ರಭಾಕರ ಶೆಟ್ಟಿ, ರಘರಾಮ ಶೆಟ್ಟಿ ಬೈಕಾಡಿ, ಉಪಾಧ್ಯಕ್ಷ ಕುಮಾರ್ ಸುವರ್ಣ, ಪ್ರೇಮ ಪೂಜಾರಿ, ಶಕುಂತಳಾ ಶೆಟ್ಟಿ, ಲೆಡ್ವಿನ್ ಲೋಬೋ, ಸವಿತಾ ಶೆಟ್ಟಿ, ಶಾಂತ ಪೂಜಾರಿ ಬೈಕಾಡಿ, ಆರೂರು ಪ್ರಬಾಕರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಸಮಿತಿಯ ಬೋಜ ಶೆಟ್ಟಿ ಮುಂಡ್ಕಿನಜಡ್ಡು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News