ಎನ್‌ಪಿಆರ್ ಅರ್ಜಿಯಲ್ಲಿ ಕೊನೆ ಕ್ಷಣದ ಬದಲಾವಣೆ ಸಾಧ್ಯತೆ: ಗೃಹ ಸಚಿವಾಲಯದ ಅಧಿಕಾರಿಗಳು

Update: 2020-01-16 14:41 GMT

ಹೊಸದಿಲ್ಲಿ, ಜ. 16: ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅರ್ಜಿಯ ಪೂರ್ವಭಾವಿ ರೂಪವನ್ನು ಈಗಾಗಲೇ ರಚಿಸಲಾಗಿದ್ದರೂ ಅಗತ್ಯಕ್ಕೆ ಅನುಗುಣವಾಗಿ ಕೊನೆಯ ಕ್ಷಣದಲ್ಲಿ ಬದಲಾಯಿಸುವ ಹಾಗೂ ಅದನ್ನು ಜನರಿಗಾಗಿ ಸುಲಭಗೊಳಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವಾಲಯ ಪ್ರತಿಪಾದಿಸಿದೆ.

ಮೂಲಗಳ ಪ್ರಕಾರ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅರ್ಜಿ 21 ಪ್ರಶ್ನೆಗಳನ್ನು ಒಳಗೊಂಡಿದೆ. ಅಲ್ಲದೆ, ಪ್ರತಿ ಕುಟುಂಬದ ಯಜಮಾನ ತಾನು ನೀಡಿದ ಮಾಹಿತಿ ಸತ್ಯವಾಗಿದೆ ಎಂದು ದಾಖಲೆಗಳಿಗೆ ಸಹಿ ಹಾಕಬೇಕು. ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಹಾಗೂ ಸಮೀಕ್ಷೆ ಸಂದರ್ಭ ತಪ್ಪು ಮಾಹಿತಿ ನೀಡಿದರೆ, 1 ಸಾವಿರ ರೂಪಾಯಿ ದಂಡ ವಿಧಿಸುವ ಅವಕಾಶ ಇದೆ. ‘‘ಈ ಹಿಂದಿನ ದತ್ತಾಂಶ ಸಂಗ್ರಹ ಪ್ರಕ್ರಿಯೆಯ ಸಂದರ್ಭ ಹಲವು ಜನರು ಈ ರೀತಿಯ ಮಾಹಿತಿ ನೀಡಲು ಹಿಂಜರಿದಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಸರಕಾರ ಈ ಬಾರಿ ಪಾನ್ ಗುರುತುಪತ್ರದ ವಿವರ ಕೋರದಿರಲು ನಿರ್ಧರಿಸಿದೆ. ಪೂರ್ವ ಭಾವಿ ರೂಪ ಸಿದ್ಧವಾಗಿದೆ. ಆದರೆ, ಪ್ರಕ್ರಿಯೆ ಆರಂಭಿಸುವ ಹಾಗೂ ಅಂತಿಮಗೊಳಿಸುವ ಮುನ್ನ ಅರ್ಜಿಯಲ್ಲಿರುವ ಪ್ರಶ್ನೆಗಳನ್ನು ಸೇರಿಸುವ ಅಥವಾ ತೆಗೆಯುವ ಸಾಧ್ಯತೆ ಇದೆ’’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸರಿಯಾದ ಮಾಹಿತಿ ನೀಡುವಂತೆ ಗಣತಿದಾರರು ಸಾರ್ವಜನಿಕರನ್ನು ಉತ್ತೇಜಿಸುವಂತೆ ಮೂಲಗಳು ತಿಳಿಸಿವೆ. ಗಣತಿದಾರರಿಗೆ ಯಾವುದೇ ದಾಖಲೆಗಳನ್ನು ತೋರಿಸುವಂತೆ ಸರಕಾರ ಕೇಳುವುದಿಲ್ಲ. ಆದರೆ, ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಅರ್ಜಿ ತುಂಬಿಸಲು ಆಧಾರ್ ಸಂಖ್ಯೆ, ಮತದಾನದ ಗುರುತಿನ ಚೀಟಿ ಸಂಖ್ಯೆ, ಚಾಲನಾ ಪರವಾನಿಗೆ ಸಂಖ್ಯೆ ಕೇಳಿದರೆ ನೀಡುವಂತೆ ಗೃಹ ಸಚಿವಾಲಯ ತಿಳಿಸಿದೆ. ಗಣತಿದಾರರು ಸ್ಥಳೀಯರಿಗೆ ತಿಳಿದಿರುವ ಹಾಗೂ ಸ್ಥಳೀಯ ಜನರಿಗೆ ಪರಿಚಯವಿರುವ ಅದ್ಯಾಪಕರು. ಈ ಗಣತಿ ಕೆಲಸ ನಿರ್ವಹಣೆಗೆ ಅವರು ಗರಿಷ್ಠ 25 ಸಾವಿರ ರೂಪಾಯಿ ಪಡೆಯಲಿದ್ದಾರೆ. ಜನಗಣತಿ ವೇಳೆ ತಪ್ಪು ಮಾಹಿತಿ ನೀಡುವ ಜನರ ವಿರುದ್ಧ ಕೂಡ ಅವರು ಕಣ್ಣಿರಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News