ವಾರದ ಸಂತೆ ಮಾರುಕಟ್ಟೆ, ಶೌಚಾಲಯಗಳಿಗೆ ನಿರ್ಮಾಣಕ್ಕೆ ಅನುದಾನ

Update: 2020-01-16 14:53 GMT

ಬಂಟ್ವಾಳ, ಜ. 16: ಪುರಸಭೆಯ 2020-2021ನೇ ಸಾಲಿನ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಬುಧವಾರ ಬಂಟ್ವಾಳ ಪುರಸಭೆಯಲ್ಲಿ ಬಜೆಟ್ ಪೂರ್ವ ತಯಾರಿಯ ಸಮಾಲೋಚನಾ  ಸಭೆಯು ಪುರಸಭಾ ಮುಖ್ಯಾಧಿಕಾರಿ ಲೀನಾ ಬ್ರಿಟ್ಡೋ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಬಿ.ಸಿ.ರೋಡ್ ಪರಿಸರದಲ್ಲಿ ಸಂತೆಮಾರುಕಟ್ಟೆ ನಿರ್ಮಾಣ ಹಾಗೂ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು, ಕೈಕಂಬ ಹಾಗೂ ಮೆಲ್ಕಾರ್‍ನಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಅಂಬೇಡ್ಕರ್ ಭವನದ ಇತರ ಕೆಲಸಗಳಿಗೆ ಮುಂದಿನ ಬಜೆಟ್‍ನಲ್ಲಿ ಅನುದಾನ ಮೀಸಲಿರಿಸಲು ವಿವಿಧ ಸಂಘ ಸಂಸ್ಥೆಯ ಪ್ರಮುಖರು, ಗಣ್ಯರು ಹಾಗೂ ಪತ್ರಕರ್ತರು ನೀಡಿದ ಸಲಹೆಯನ್ನು ಪರಿಗಣಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.

3 ನಗರದಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ

ವಿವಿಧ ಕೆಲಸಕಾರ್ಯಗಳಿಗಾಗಿ ಬರುವ ಜನಸಾಮಾನ್ಯರಿಗೆ ಬಿ.ಸಿ.ರೋಡಿನಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆಯಲ್ಲದಿದ್ದು, ಸಾರ್ವಜನಿಕ ಸ್ಥಳವನ್ನೇ ಮೂತ್ರಶಂಕೆಗೆ ಬಳಸುತ್ತಿದ್ದಾರೆ. ಅದೇ ರೀತಿ ಬೆಳೆಯುತ್ತಿರುವ ಪ್ರದೇಶವಾದ ಕೈಕಂಬ, ಮೆಲ್ಕಾರ್‍ನಲ್ಲೂ ಶೌಚಾಲಯದ ವ್ಯವಸ್ಥೆಯಿಲ್ಲದಿದ್ದು, ಜನರು ಪರದಾಡುವಂತ ಪರಿಸ್ಥಿತಿ ಇದೆ. ಬಿ.ಸಿ.ರೋಡಿನಲ್ಲಿದ್ದ ಶೌಚಾಲಯವನ್ನು ತೆರವು ಗೊಳಿಸಿ, ಅಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಲಾಗಿದೆ. ಮಿನಿವಿಧಾನಸೌಧದಲ್ಲು ಈಗ ಶೌಚಾಲಯಕ್ಕೆ ಶುಚಿತ್ವದ ನೆಲೆಯಲ್ಲಿ ಬೀಗ  ಹಾಕಲಾಗಿದೆ ಜನರು ಅನಿವಾರ್ಯ ಎಂಬಂತೆ ಸಾರ್ವಜನಿಕವಾಗಿಯೇ ಮೂತ್ರಶಂಕೆ ಮಾಡುತ್ತಿದ್ದಾರೆ ಎಂದು ಸಭೆಯಲ್ಲಿ ಮುಖ್ಯಾಧಿಕಾರಿಯವರ ಗಮನಕ್ಕೆ ತರಲಾಯಿತು. ಇದಕ್ಕೆ ಸ್ಪಂದಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು, ಪ್ರಮುಖ ಈ ಮೂರು ಕಡೆಯಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಅನುದಾನ ಮೀಸಲಿಡುವುದಾಗಿ ಪ್ರಕಟಿಸಿದರು.

ರವಿವಾರ ಸಂತೆ ಮಾರುಕಟ್ಟೆ

ಬಿ.ಸಿ.ರೋಡಿನಲ್ಲಿ ಪ್ರತಿ ರವಿವಾರ ರಸ್ತೆಬದಿ ತರಕಾರಿ ಇನ್ನಿತರ ಮನೆ ಬಳಕೆ ಸಾಮಗ್ರಿಗಳನ್ನು ಮಾರಾಟ ಮಾಡುವ ಬೀದಿಬದಿ ವ್ಯಾಪಾರಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಿಕೊಡುವಂತೆ ದಲಿತ ಮುಖಂಡ ರಾಜಪಲ್ಲಮಜಲು ಆಗ್ರಹಿಸಿದರು. ಇದಕ್ಕೆ ಬೀದಿಬದಿ ವ್ಯಾಪಾರಸ್ಥರಿಗೆ ಶುಲ್ಕವನ್ನು ವಿಧಿಸಿದರೆ ಪುರಸಭೆಗೂ ಆದಾಯಬರಬಹುದು. ಸಾರ್ವಜನಿಕರಿಗೆ ಕೂಡ ಅನುಕೂಲವಾಗುವುದು ಎಂದು ಸಲಹೆ ನೀಡಿದರು.

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಅವರು ಈ ನಿಟ್ಟಿನಲ್ಲಿ ಬಿ.ಸಿ.ರೋಡ್‍ನಲ್ಲಿ ಸ್ಥಳ ಪರಿಶೀಲಿಸಿ ಸೂಕ್ತ ಜಾಗದಲ್ಲಿ ವಾರದ ಸಂತೆ ಮಾರುಕಟ್ಟೆ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಬಿ.ಸಿ.ರೋಡಿನಲ್ಲಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್ ಭವನಕ್ಕೆ ಹೊರಭಾಗದಲ್ಲಿ ಅಡುಗೆ ಕೋಣೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆಯು ರಾಜಪಲ್ಲಮಜಲು ಮನವಿ ಮಾಡಿದರು. ಇದಕ್ಕು ಶೇ.24.5ರಲ್ಲಿ ಅನದಾನ ಕಾದಿರಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಾಧಿಕಾರಿಯವರು ಭರವಸೆ ನೀಡಿದರು.

ಕಾಮಗಾರಿ ಹೆಸರಿನಲ್ಲಿ ರಸ್ತೆಗೆ ಹಾನಿ:

ಪುರಸಭಾ ವ್ಯಾಪ್ತಿಯಲ್ಲಿ ಎರಡನೇ ಹಂತದ 24x7 ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ವೇಳೆ ಪೈಪ್ ಲೈನ್ ಅಳವಡಿಸಲು ಎಲ್ಲ ರಸ್ತೆಗಳನ್ನು ಅಗೆದು ಆರೆಬರೆ ಕೆಲಸಮಾಡಿರುವ ಕೆಯುಡಬ್ಲ್ಯೂಎಸ್ ವಿರುದ್ಧ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಯಿತು.

ಹೊಸ, ಹೊಸ ಕಾಂಕ್ರಿಟ್ ರಸ್ತೆ, ಡಾಮಾರು ರಸ್ತೆಯನ್ನು ಅಗೆದ ಹಾಕಿ ಬಳಿಕ ಅದನ್ನು ಸಮರ್ಪಕವಾಗಿ ಮುಚ್ಚದೆ ಮತ್ತು ಹಿಡಿದ ಕೆಲಸವನ್ನು ಅಪೂರ್ಣಗೊಳಿಸಿರುವುದು ಸಹಿತ ಕೆಯುಡಬ್ಲ್ಯೂಎಸ್ ಅಸಮರ್ಪಕ ಕಾಮಗಾರಿ ವಿರುದ್ಧ ದೂರುಗಳ ಸುರಿಮಳೆಯೇ ಹರಿದು ಬಂತು. ಈ ಬಗ್ಗೆ ಸಂಬಂಧಪಟ್ಟವರನ್ನು ಕರೆಸಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ ಭರವಸೆಯಿತ್ತರು.

ಸಭೆಯಲ್ಲಿ ವ್ಯವಸ್ಥಾಪಕಿ ಲೀಲಾವತಿ, ಸಮುದಾಯ ಸಂಘಟಕಿ ಉಮಾವತಿ, ಕಿರಿಯ ಅಭಿಯಂತರ ಡೊಮಿನಿಕ್ ಡಿಮೆಲ್ಲೊ, ಅಕೌಂಟೆಂಟ್ ಸಮ್ಮಿ ವಿಲ್ಸನ್ ಲೋಬೊ, ಕಿರಿಯ ಅಭಿಯಂತರರ ಸಹಾಯಕ ಇಕ್ಬಾಲ್, ಪ್ರಥಮ ದರ್ಜೆ ಸಹಾಯಕರಾದ ಅಬ್ದುಲ್ ರಝಾಕ್, ಮೀನಾಕ್ಷಿ ಉಪಸ್ಥಿತರಿದ್ದರು.

ಇತರ ಸಲಹೆ-ದೂರುಗಳು

ಪ್ಲಾಸ್ಟಿಕ್ ಮುಕ್ತತೆಗಾಗಿ ಕ್ಯಾರಿ ಬ್ಯಾಗ್ ಬಳಕೆ, ಕಸದ ವಾಹನ ಅವ್ಯವಸ್ಥೆಗಳು, ಕಿರಿದಾದ ರಸ್ತೆಗಳಲ್ಲಿ ಗಾರ್ಡನ್, ಮೇಲ್ಸೆತುವೆಯ ಅಡಿಭಾಗದಲ್ಲಿ ಸ್ಟಿಕ್ಕರ್-ಪೋಸ್ಟರ್‍ಗಳ ಹಾವಳಿ, ರಸ್ತೆಯಲ್ಲಿ ಅನಧಿಕೃತ ಟೆಂಟ್, ಮೀನು ಮಾರುಕಟ್ಟೆ ನಿರ್ಮಾಣ, ಪುರಸಭಾ ವ್ಯಾಪ್ತಿಯಲ್ಲಿ ಫುಟ್‍ಪಾತ್ ಇಲ್ಲದೆ ಪಾದಚಾರಿಗಳಿಗಾಗುವ ತೊಂದರೆ, ಬಿ.ಸಿ.ರೋಡಿನಲ್ಲಿರುವ ಫುಟ್‍ಪಾತ್‍ನ್ನು ದ್ವಿಚಕ್ರ ಸಹಿತ ಕೆಲ ವಾಹನಗಳು ಅತಿಕ್ರಮಿಸಿ ಪಾರ್ಕ್ ಮಾಡುತ್ತಿರುವುದು, ಬಂಟ್ವಾಳ ಪೇಟೆ ಅಗಲೀಕರಣ, ಕಸ ವಿಲೇವಾರಿ, ಅನಧಿಕೃತ ಫ್ಲೆಕ್ಸ್ ಗಳ ಹಾವಳಿ ಮೊದಲಾದ ಸಮಸ್ಯೆಗಳ ಬಗ್ಗೆ ನಾಗರಿಕ ಪ್ರತಿನಿಧಿಗಳಾದ ತುಕಾರಾಮ ಪೂಜಾರಿ, ದಾಮೋದರ್ ಸಂಚಯಗಿರಿ, ಶಿವಶಂಕರ್ ಮತ್ತಿತರರು ಸಭೆಯ ಗಮನಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News