×
Ad

ಫೆ.7ರಿಂದ ಎಬಿವಿಪಿ 39ನೇ ರಾಜ್ಯ ಸಮ್ಮೇಳನ

Update: 2020-01-16 20:25 IST

ಮಂಗಳೂರು, ಜ.16: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ 39ನೇ ರಾಜ್ಯ ಸಮ್ಮೇಳನ ೆ.7ರಿಂದ 9ರವರೆಗೆ ನಗರದ ಪುರಭವನದಲ್ಲಿ ನಡೆಯಲಿದೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿ ಹರ್ಷ ನಾರಾಯಣ, ಶಿಕ್ಷಣ, ರಾಷ್ಟ್ರೀಯತೆ ಮತ್ತು ತಂತ್ರಜ್ಞಾನ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾಗಿರುವ ಸಮ್ಮೇಳನದಲ್ಲಿ ರಾಜ್ಯದ ಎಲ್ಲ ಭಾಗಗಳಿಂದ 1,200ಕ್ಕೂ ಹೆಚ್ಚು ವಿದ್ಯಾರ್ಥಿ, ಅಧ್ಯಾಪಕ ಪ್ರತಿನಿಧಿಗಳು ಭಾಗವಹಿಸುವರು. ಉದ್ಘಾಟನಾ ಸಮಾರಂಭಕ್ಕೆ ಡಾ.ಕೆ. ಕಸ್ತೂರಿ ರಂಗನ್ ಅವರನ್ನು ಕರೆತರಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳು, ಅಧ್ಯಾಪಕರು, ಶಿಕ್ಷಣ ತಜ್ಞರು, ಶೈಕ್ಷಣಿಕ ಆಡಳಿತಗಾರರು ಸಮ್ಮೇಳನದಲ್ಲಿ ಪಾಲ್ಗೊಂಡು, ಶೈಕ್ಷಣಿಕ-ಸಾಮಾಜಿಕ ಸಮಸ್ಯೆ, ಸವಾಲುಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಎಬಿವಿಪಿ ಇದುವರೆಗೆ ಹೋರಾಟ ನಡೆಸಿದ ಸಂವಿಧಾನ 370ನೇ ವಿಧಿ ರದ್ದತಿ ಆಗಿದೆ. ಹೊಸ ಶಿಕ್ಷಣ ನೀತಿ, ಬಾಂಗ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕುವ ಪ್ರಕ್ರಿಯೆಗಳು ನಡೆಯುತ್ತಿವೆ. ಶೈಕ್ಷಣಿಕ, ಸಾಮಾಜಿಕ, ಪರಿಸರ ವಿಷಯಗಳಿಗೆ ಸಂಬಂಧಿಸಿದ ಮೂರು ನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರುದ್ಧ ದೇಶದಲ್ಲಿ ವ್ಯವಸ್ಥಿತ ಗೊಂದಲ ಸೃಷ್ಟಿಸಲಾಗಿದೆ. ಈ ಬಗ್ಗೆ ಎಬಿವಿಪಿ ಮಾಜಿ ರಾಜ್ಯಾಧ್ಯಕ್ಷ ಚ.ನ. ಶಂಕರ ರಾವ್ ಅವರು ಬರೆದ ಸಮರ್ಪಕ ಮಾಹಿತಿಯ ಪುಸ್ತಕವನ್ನು ರಾಜ್ಯ ಎಬಿವಿಪಿ ವತಿಯಿಂದ ಈಗಾಗಲೇ ಬಿಡುಗಡೆ ಮಾಡಿ, ಹಂಚಲಾಗುತ್ತಿದೆ. ದೇಶದ ಬೇರೆ ರಾಜ್ಯಗಳಲ್ಲೂ ಆಯಾ ರಾಜ್ಯದ ಭಾಷೆಗಳಲ್ಲಿ ಪುಸ್ತಕ ಪ್ರಕಟಿಸಲಾಗುತ್ತಿದೆ. ಜತೆಗೆ ರ್ಯಾಲಿಗಳ ಮೂಲಕವೂ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಎಬಿವಿಪಿ ರಾಜ್ಯ ಸಮ್ಮೇಳನ ಮಂಗಳೂರಿನಲ್ಲಿ ಮೂರನೇ ಬಾರಿಗೆ ನಡೆಯುತ್ತಿದೆ. 20 ವರ್ಷದ ಬಳಿಕ ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಈಗಾಗಲೇ ಸ್ವಾಗತ ಸಮಿತಿ ರಚನೆಗೊಂಡಿದೆ. ‘ಜಲಿಯನ್ ವಾಲಾಭಾಗ್’ ದುರಂತ ನಡೆದು 100 ವರ್ಷವಾದ ಹಿನ್ನೆಲೆಯಲ್ಲಿ ಸಮ್ಮೇಳನದಲ್ಲಿ ಈ ಕುರಿತ ಪ್ರದರ್ಶಿನ ಇರಲಿದೆ. ಆಹಾರ ಪದಾರ್ಥಗಳನ್ನು ಪೋಲು ಮಾಡದಿರುವುದು, ಪ್ಲಾಸ್ಟಿಕ್ ಮುಕ್ತ ಸಮ್ಮೇಳನ ನಡೆಸುವ ಸಂಕಲ್ಪ ಮಾಡಲಾಗಿದೆ ಎಂದು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ತಿಳಿಸಿದರು.

ಎಬಿವಿಪಿ ಮಂಗಳೂರು ಮಹಾನಗರ ಅಧ್ಯಕ್ಷೆ ಭಾರತಿ ಪ್ರಭು, ನಗರ ಕಾರ್ಯದರ್ಶಿ ಮಣಿಕಂಠ ಕಳಸ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News