92,000 ಕೋ.ರೂ. ಬಾಕಿ ಪಾವತಿಸಲು ದೂರಸಂಪರ್ಕ ಕಂಪೆನಿಗಳಿಗೆ ಸುಪ್ರೀಂ ಆದೇಶ

Update: 2020-01-16 15:37 GMT

ಹೊಸದಿಲ್ಲಿ,ಜ.16: ತಮ್ಮಿಂದ 92,000 ಕೋ.ರೂ.ಗಳ ಬಾಕಿಯನ್ನು ವಸೂಲು ಮಾಡಲು ಸರಕಾರಕ್ಕೆ ಅವಕಾಶವನ್ನು ನೀಡಿರುವ ಹಿಂದಿನ ಆದೇಶದ ಪುನರ್‌ಪರಿಶೀಲನೆಯನ್ನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದ್ದು, ಮೊಬೈಲ್ ಸೇವಾ ಸಂಸ್ಥೆಗಳಿಗೆ ಭಾರೀ ಹಿನ್ನಡೆಯುಂಟಾಗಿದೆ.

  ಟೆಲಿಕಾಮ್ ಕಂಪೆನಿಗಳಿಂದ ಬಾಕಿ ಮೊತ್ತವನ್ನು ವಸೂಲು ಮಾಡಲು ದೂರ ಸಂಪರ್ಕ ಇಲಾಖೆ (ಡಾಟ್)ಗೆ ಅವಕಾಶ ಕಲ್ಪಿಸಿ ಕಳೆದ ವರ್ಷ ಆದೇಶಿಸಿದ್ದ ಸರ್ವೋಚ್ಚ ನ್ಯಾಯಾಲಯವು,ತನ್ನ ಆದೇಶವನ್ನು ಪಾಲಿಸಲು ಈ ಕಂಪೆನಿಗಳಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಿತ್ತು. ಸದ್ರಿ ಆದೇಶದ ಪುನರ್‌ಪರಿಶೀಲನೆಯನ್ನು ಕೋರಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಇಂಡಿಯಾ ಸೇರಿದಂತೆ ಕಂಪೆನಿಗಳು ಅರ್ಜಿಯನ್ನು ಸಲ್ಲಿಸಿದ್ದವು.

ಕೋಟ್ಯಂತರ ರೂ.ಗಳ ಸಾಲದ ಹೊರೆಯಿಂದ ತತ್ತರಿಸಿರುವ ದೂರಸಂಪರ್ಕ ಕಂಪೆನಿಗಳು ಬದುಕುಳಿಯಲು ತೀವ್ರ ಹೋರಾಟದಲ್ಲಿ ತೊಡಗಿರುವ ನಡುವೆಯೇ ಸರ್ವೋಚ್ಚ ನ್ಯಾಯಾಲಯವು ಗುರುವಾರ ಅವುಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ.

ಈ ಕಂಪೆನಿಗಳು ತನಗೆ ಬಾಕಿ ಮತ್ತು ಅದರ ಮೇಲಿನ ಬಡ್ಡಿ ಸೇರಿದಂತೆ 92,000 ಕೋ.ರೂ.ಗಳನ್ನು ಪಾವತಿಸಬೇಕಿದೆ ಎಂಬ ಡಾಟ್ ಬೇಡಿಕೆಯನ್ನು ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಎತ್ತಿ ಹಿಡಿದಿತ್ತು. ಬಾಕಿಯನ್ನು ಪಾವತಿಸಲು ಕಂಪೆನಿಗಳಿಗೆ ಮೂರು ತಿಂಗಳ ಕಾಲಾವಕಾಶವನ್ನು ಅದು ನೀಡಿತ್ತು.

ಭಾರ್ತಿ ಏರ್‌ಟೆಲ್, ವೊಡಾಫೋನ್ ಇಂಡಿಯಾ ಮತ್ತು ರಿಲಾಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್)ನಿಂದ ಪರವಾನಿಗೆ ಶುಲ್ಕವಾಗಿ 92,000 ಕೋ.ರೂ. ಮತ್ತು ಸ್ಪೆಕ್ಟ್ರಂ ಬಳಕೆ ಶುಲ್ಕವಾಗಿ 41,000 ಕೋ.ರೂ.ತನಗೆ ಬರಬೇಕಿದೆ ಎಂದು ಡಾಟ್ ಅರ್ಜಿಯಲ್ಲಿ ತಿಳಿಸಿತ್ತು. ಈ ಪೈಕಿ ಸುಮಾರು 23,000 ಕೋ.ರೂ.ಗಳನ್ನು ಭಾರ್ತಿ ಏರ್‌ಟೆಲ್,19,873.71 ಕೋ.ರೂ.ಗಳನ್ನು ವೊಡಾಫೋನ್ ಇಂಡಿಯಾ ಮತ್ತು 16,456.47 ಕೋ.ರೂ.ಗಳನ್ನು ಆರ್‌ಕಾಮ್ ಬಾಕಿ ಉಳಿಸಿಕೊಂಡಿದ್ದವು.

ಡಿಸೆಂಬರ್ 2017ರಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದ ಆರ್‌ಕಾಮ್ ಕಳೆದ ವರ್ಷ ದಿವಾಳಿ ಅರ್ಜಿಯನ್ನು ಸಲ್ಲಿಸಿದ್ದರೆ,ಸರಕಾರವು ಪರಿಹಾರದ ಕೊಡುಗೆಯನ್ನು ನೀಡದಿದ್ದರೆ ಅಥವಾ ಕಾನೂನು ಮೂಲಕ ಪರಿಹಾರ ದೊರೆಯದಿದ್ದರೆ ತಾನು ಭಾರತದಲ್ಲಿ ಕಾರ್ಯಾಚರಣೆಯನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ವೊಡಾಫೋನ್ ಇಂಡಿಯಾ ಈಗಾಗಲೇ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News