ವಿಶ್ವಭಾರತಿ ವಿವಿಯಲ್ಲಿ ವಿದ್ಯಾರ್ಥಿಗಳನ್ನು ಥಳಿಸಿದ ಎಬಿವಿಪಿ ಕಾರ್ಯಕರ್ತರು

Update: 2020-01-16 16:06 GMT

ಕೋಲ್ಕತಾ,ಜ.16: ಆರೆಸ್ಸೆಸ್‌ನ ವಿದ್ಯಾರ್ಥಿ ಸಂಘಟನೆ ಎಬಿವಿಪಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ, ಥಳಿಸಿರುವ ಆರೋಪ ಮತ್ತೆ ಕೇಳಿ ಬಂದಿದೆ. ಜೆಎನ್‌ಯು ಘಟನೆ ಈ ಬಾರಿ ಪ.ಬಂಗಾಳದ ವಿಶ್ವಭಾರತಿ ವಿವಿಯಲ್ಲಿ ಪುನರಾವರ್ತನೆಗೊಂಡಿದೆ. ಬುಧವಾರ ರಾತ್ರಿ 10 ಗಂಟೆಯ ಸುಮಾರಿಗೆ ಎಬಿವಿಪಿಗೆ ಸೇರಿದವರು ಎನ್ನಲಾಗಿರುವ ರಾಡ್ ಮತ್ತು ದೊಣ್ಣೆಗಳಿಂದ ಸಜ್ಜಿತ ದುಷ್ಕರ್ಮಿಗಳು ಮತ್ತು ಬಾಹ್ಯ ವ್ಯಕ್ತಿಗಳ ಗುಂಪು ವಿವಿ ಕ್ಯಾಂಪಸ್‌ನಲ್ಲಿ ಕೆಲವು ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಇಬ್ಬರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು,ಈ ಪೈಕಿ ಓರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

“ಜ.8ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಸಂದರ್ಭ ನಾವು ಕ್ಯಾಂಪಸ್‌ನಲ್ಲಿ ಮತಪ್ರದರ್ಶನ ನಡೆಸಿದ್ದರಿಂದ ಗೂಂಡಾಗಳು ಪ್ರತೀಕಾರಕ್ಕಾಗಿ ಪ್ರಯತ್ನಿಸುತ್ತಿದ್ದರು. ಮುಷ್ಕರ ನಿರತ ಕಾರ್ಮಿಕರೊಂದಿಗೆ ಏಕತೆಯನ್ನು ವ್ಯಕ್ತಪಡಿಸುವುದು ಹಾಗೂ ಇತ್ತೀಚಿನ ಶುಲ್ಕ ಹೆಚ್ಚಳ,ಶಿಕ್ಷಣಕ್ಷೇತ್ರದ ಮೇಲೆ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ನಿರಂತರ ದಾಳಿ ಮತ್ತು ಸಿಎಎ ಹಾಗೂ ಎನ್‌ಆರ್‌ಸಿ ಇವುಗಳ ವಿರುದ್ಧ ಪ್ರತಿಭಟನೆಯನ್ನು ದಾಖಲಿಸುವುದು ವಿದ್ಯಾರ್ಥಿಗಳ ಮತಪ್ರದರ್ಶನದ ಉದ್ದೇಶವಾಗಿತ್ತು”. ಸಿಎಎ ಕುರಿತು ಬಿಜೆಪಿ ಸಂಸದ ಸ್ವಪನ್ ದಾಸಗುಪ್ತಾ ಅವರು ನೀಡಲಿದ್ದ ಉಪನ್ಯಾಸವನ್ನು ಪ್ರತಿಭಟಿಸುವುದು ಇನ್ನೊಂದು ಉದ್ದೇಶವಾಗಿತ್ತು ’ಎಂದು ವಿಶ್ವಭಾರತಿ ವಿವಿಯ ಸ್ನಾತಕೋತ್ತರ ವಿದ್ಯಾರ್ಥಿ ಮೈನುಲ್ ಹಸನ್ ತಿಳಿಸಿದರು.

ಬುಧವಾರ ರಾತ್ರಿ ವಿವಿಯ ಭದ್ರತಾ ಅಧಿಕಾರಿ ಸುಪ್ರಿಯೊ ಗಂಗೂಲಿ ಅವರು ಉಪಸ್ಥಿತರಿದ್ದರೂ ವಿದ್ಯಾರ್ಥಿಗಳ ಮೇಲೆ ಗೂಂಡಾಗಳ ದಾಳಿ ನಡೆದಿದೆ. ಕ್ರಮವನ್ನು ಕೈಗೊಳ್ಳುವಂತೆ ವಿದ್ಯಾರ್ಥಿಗಳು ಕೇಳಿಕೊಂಡಾಗ ತಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು ಎಂದು ಹಸನ್ ಹೇಳಿದರು.

 “ನಾನು ಸೇರಿದಂತೆ ಎಂಟು ವಿದ್ಯಾರ್ಥಿಗಳು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದ್ದು,ಅಲ್ಲಿಗೂ ನುಗ್ಗಿದ್ದ ಗೂಂಡಾಗಳು ನಮ್ಮ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದರು. ಅಲ್ಲಿದ್ದ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿರಲಿಲ್ಲ. ಆ ವೇಳೆ ಇತರ ವಿದ್ಯಾರ್ಥಿಗಳು ಆಸ್ಪತ್ರೆಗೆ ಆಗಮಿಸಿದ್ದರಿಂದ ದಾಳಿ ಕೊನೆಗೊಂಡಿತ್ತು” ಎಂದರು.

ಈ ಬರ್ಬರ ದಾಳಿಗೆ ವಿವಿ ಕುಲಪತಿ ಬಿದ್ಯುತ್ ಚಕ್ರವರ್ತಿ ಅವರೇ ಹೊಣೆ ಎಂದು ವಿದ್ಯಾರ್ಥಿಗಳ ಜಂಟಿ ಸಮಿತಿಯು ಆರೋಪಿಸಿದೆ. ಕುಲಪತಿ ಹುದ್ದೆಯ ಜೊತೆಗೆ ಆರೆಸ್ಸೆಸ್ ಸಂಘಟಕರೂ ಆಗಿರುವ ಅವರು ವಿದ್ಯಾರ್ಥಿಗಳ ಖಾಸಗಿ ಸೇನೆಯೊಂದನ್ನು ರೂಪಿಸಿದ್ದಾರೆ. ನಿನ್ನೆ ದಾಳಿ ನಡೆಸಿದ ಗೂಂಡಾಗಳು ಇದೇ ಸೇನೆಗೆ ಸೇರಿದವರಾಗಿದ್ದಾರೆ ಎಂದಿರುವ ಸಮಿತಿಯು,ಕುಲಪತಿಗಳು ತಕ್ಷಣ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News