×
Ad

ಪರ್ಯಾಯಕ್ಕೆ ನಿರ್ಮಲಾ ಸೀತಾರಾಮನ್, ಯಡಿಯೂರಪ್ಪ

Update: 2020-01-16 21:36 IST

ಉಡುಪಿ, ಜ.16: ಜ.17 ಮತ್ತು 18ರಂದು ನಡೆಯುವ ಅದಮಾರು ಮಠದ ಪರ್ಯಾಯ ಮಹೋತ್ಸವದಲ್ಲಿ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್ ಅವರು ಭಾಗವಹಿಸುವುದು ಖಚಿತವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ಪರ್ಯಾಯದಲ್ಲಿ ಪಾಲ್ಗೊಳ್ಳಲಿದ್ದು, ಸಮಯ ಇನ್ನೂ ನಿಗದಿಯಾಗಿಲ್ಲ ಎಂದು ಶ್ರೀಕೃಷ್ಣ ಸೇವಾ ಬಳಗದ ಗೌರವಾಧ್ಯಕ್ಷ ಕೆ.ರಘುಪತಿ ಭಟ್ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಜ.18ರ ಅಪರಾಹ್ನ 1:30ಕ್ಕೆ ಉಡುಪಿಗೆ ಆಗಮಿಸಲಿದ್ದು, 2:30ರ ಪರ್ಯಾಯ ದರ್ಬಾರ್ ಸಭೆಯಲ್ಲಿ ಭಾಗವಹಿಸುವರು. ಬೆಂಗಳೂರಿಗೆ ಅಮಿತ್ ಷಾ ಅವರು ಆಗಮಿಸಲಿರುವುದರಿಂದ ಯಡಿಯೂರಪ್ಪ ಅವರ ಭೇಟಿಯ ಸಮಯ ಇನ್ನೂ ಅಂತಿಮಗೊಂಡಿಲ್ಲ ಎಂದರು.

ಇವರಿಬ್ಬರಲ್ಲದೇ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಅಲ್ಲದೇ ರಾಜ್ಯ ಕ್ಯಾಬಿನೆಟ್‌ನ ಅನೇಕ ಮಂದಿ ಸಚಿವರು ಜ.22ರವರೆಗೆ ಪರ್ಯಾಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು ಎಂದರು. ನಾಳೆ ರಾತ್ರಿ ಹಾಗೂ ಶನಿವಾರ ಮುಂಜಾನೆಯ ಕಾರ್ಯಕ್ರಮಗಳಲ್ಲಿ ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಶ್ರೀಪಾದ ನಾಯಕ್ ಸೇರಿದಂತೆ ವಿವಿಧ ಪಕ್ಷಗಳ ಹಿರಿಯ ನಾಯಕರು ಪಾಲ್ಗೊಳ್ಳುವರು.

ಈ ಬಾರಿಯ ಪರ್ಯಾಯ ದರ್ಬಾರ್‌ನಲ್ಲಿ ಒಟ್ಟು 18 ಮಂದಿ ಸಾಧಕರು ಮತ್ತು ಮೂವರು ವಿದ್ವಾಂಸರನ್ನು ಸನ್ಮಾನಿಸಲಾಗು ವುದು. ಯಕ್ಷಗಾನ ಕಲೆಯ ಜನಕರೆಂದು ಹೇಳಲಾದ ಅದಮಾರು ಮಠದ ಮೂಲ ಯತಿಗಳಾದ ಶ್ರೀನರಹರಿ ತೀರ್ಥರ ಹೆಸರಿನಲ್ಲಿ ಈ ವರ್ಷದಿಂದ ಯಕ್ಷಗಾನ ಕ್ಷೇತ್ರದ ಹಿರಿಯ ಕಲಾವಿದನಿಗೆ ‘ನರಹರಿ ತೀರ್ಥ ಪ್ರಶಸ್ತಿ’ ನೀಡಲು ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ನಿರ್ಧರಿಸಿದ್ದು, ಚೊಚ್ಚಲ ಪ್ರಶಸ್ತಿಗೆ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರನ್ನು ಆಯ್ಕೆ ಮಾಡಲಾಗಿದೆ ಎಂದು ಶ್ರೀಕೃಷ್ಣ ಸೇವಾ ಬಳಗದ ಗೋವಿಂದರಾಜ ತಿಳಿಸಿದ್ದಾರೆ.

ಅಲ್ಲದೇ ಕುಂಜಾರುಗಿರಿ ದೇವಸ್ಥಾನದಲ್ಲಿ 75 ವರ್ಷಗಳಿಂದ ವಾದ್ಯ ಕಲಾ ಸೇವೆ ಮಾಡುತ್ತಿರುವ ದಾಸ ಶೇರಿಗಾರ್, ಹಿರಿಯ ಸಾವಯವ ಕೃಷಿಕ ಶಾನಾಡಿ ರಾಮಚಂದ್ರ ಭಟ್, ತುಳು ಭಾಷೆಗಾಗಿ ವಿದ್ವಾಂಸ ಡಾ.ಯು.ಪಿ. ಉಪಾಧ್ಯಾಯ, ಅದಮಾರು ಮಠದ ಪಾಕಶಾಸ್ತ್ರರಾದ ದಿ.ವೆಂಕಟರಮಣ ಭಟ್, ಬೆಂಗಳೂರಿನ ಹಿರಿಯ ಪತ್ರಕರ್ತ ರಮಾನಂದ ಆಚಾರ್ಯ ಕಾರ್ಕಳ ಇವರಿಗೆ ಪರ್ಯಾಯ ದರ್ಬಾರ್ ಸನ್ಮಾನ ನೀಡಲಾಗುವುದು ಎಂದರು.

ಅಲ್ಲದೇ ಜಿಲ್ಲೆಯ ಪೌರ ಕಾರ್ಮಿಕರೊಬ್ಬರಿಗೆ ಸನ್ಮಾನ ಮಾಡುವ ಉದ್ದೇಶವೂ ಅದಮಾರುಶ್ರೀಗಳಿದೆ ಎಂದ ಗೋವಿಂದರಾಜ್, ಜ.19ರಿಂದ 22ರವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ವಿವಿಧ ಸಾಧಕರನ್ನು ‘ಕೃಷ್ಣ ಸೇವಾ ಪ್ರಶಸ್ತಿಐ ನೀಡಿ ಗೌರವಿಸಲಾಗು ವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News