ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ: ದಿನಕರ ಬಾಬು

Update: 2020-01-16 16:12 GMT

ಉಡುಪಿ, ಜ.16: ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಮೂಲಕ ಮಹಿಳಾ ಉದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಗುರುವಾರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿ ಯಿಂದ ಉಡುಪಿ ರಥಬೀದಿಯಲ್ಲಿರುವ ಭಂಡಾರಕೇರಿ ಮಠದ ಮುಂಭಾಗ ದಲ್ಲಿ ಆಯೋಜಿಸಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಸಮಾಜ ಮತ್ತು ಕುಟುಂಬದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಗಣನೀಯವಾಗಿದ್ದು, ಮಹಿಳೆಯರು ಆರಂಭಿಸುವ ಉದ್ದಿಮೆಗಳಿಗೆ ಮತ್ತು ಅವರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು. ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ ಮಹಿಳೆ ಯರು ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ ಮಹಿಳೆಯರ ಸಬಲೀಕರಣಕ್ಕೆ, ಮಹಿಳೆಯರ ಏಳಿಗೆಗೆ ಪ್ರೋತ್ಸಾಹಿಸಿ ಅವರಿಗೆ ಇನ್ನೂ ಹೆಚ್ಚು ಅವಾಶಗಳು ಸಿಗುವಂತೆ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶೇಷಪ್ಪ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅವಿನಾಶ್ ಕಾರ್ಯಕ್ರಮ ನಿರೂಪಿಸಿದರು.

ಜ.16ರಿಂದ 18ರವರೆಗೆ 3 ದಿನಗಳ ಕಾಲ ನಡೆಯುವ ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಯಾರಿಸಿದ ವಸ್ತುಗಳು, ಉದ್ಯೋಗಿನಿ ಯೋಜನೆಯಡಿ ನೆರವು ಪಡೆದ ಫಲಾನುವಿಗಳು ಆರಂಭಿಸಿರುವ ಉದ್ದಿಮೆಗಳ ಉತ್ಪನ್ನಗಳು, ಮಹಿಳೆಯರು ಮನೆಯಲ್ಲಿ ತಯಾರಿಸುವ ವಸ್ತುಗಳು, ದಿನನಿತ್ಯದ ಬಳಕೆಯ ವಸ್ತುಗಳು, ಕರಕುಶಲ ವಸ್ತುಗಳು, ಬ್ಯಾಗ್‌ಗಳು, ಆಹಾರ ಉತ್ನನ್ನಗಳು ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News