ಕರ್ಣಾಟಕ ಬ್ಯಾಂಕ್ : 123.14 ಕೋ.ರೂ. ತೃತೀಯ ತ್ರೈಮಾಸಿಕದ ನಿವ್ವಳ ಲಾಭ ಘೋಷಣೆ
ಮಂಗಳೂರು, ಜ.16: ದೇಶದ ಪ್ರಖ್ಯಾತ ಬ್ಯಾಂಕುಗಳಲ್ಲಿ ಪರಿಗಣಿಸಲ್ಪಡುವ ಕರ್ಣಾಟಕ ಬ್ಯಾಂಕ್ ಪ್ರಸಕ್ತ ವಿತ್ತೀಯ ವರ್ಷದ ತೃತೀಯ ತ್ರೈಮಾಸಿಕದಲ್ಲಿ 123.14 ಕೋ.ರೂ. ನಿವ್ವಳ ಲಾಭವನ್ನು ಘೋಷಿಸಿದೆ.
ಕಳೆದ ವರ್ಷದ ಈ ತ್ರೈಮಾಸಿಕದ ಅವಧಿಯಲ್ಲಿ ಬ್ಯಾಂಕ್‌ನ ನಿವ್ವಳ ಲಾಭವು 140.41 ಕೋ.ರೂ. ಆಗಿತ್ತು. ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ ಅವಧಿಯ (ಡಿಸೆಂಬರ್ 19ರ ಅಂತ್ಯಕ್ಕೆ) ನಿವ್ವಳ ಲಾಭವು 404.47 ಕೋ.ರೂ.ಗಳಾಗಿದ್ದು, ಕಳೆದ ವರ್ಷದ ಈ ಅವಧಿಯಲ್ಲಿ ಅದು 415.51 ಕೋ.ರೂ.ಗಳಷ್ಟಿತ್ತು.
ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದ ನಿರ್ವಹಣಾ ಲಾಭವು 501.79 ಕೋ.ರೂ.ಗಳಾಗಿದ್ದು, ಕಳೆದ ವರ್ಷದ ಈ ಅವಧಿಯಲ್ಲಿ ನಿರ್ವಹಣಾ ಲಾಭವು 400.37 ಕೋ.ರೂ. ಆಗಿತ್ತು. ವರ್ಷದಿಂದ ವರ್ಷಕ್ಕೆ ನಿರ್ವಹಣಾ ಲಾಭವು ಶೇ.25.33 ವೃದ್ಧಿಯನ್ನು ಕಂಡಿದೆ. ಅಂತೆಯೆ ಪ್ರಸಕ್ತ ವಿತ್ತೀಯ ವರ್ಷದ ಒಂಬತ್ತು ತಿಂಗಳುಗಳ ನಿರ್ವಹಣಾ ಲಾಭವು ಶೇ 12.41 ವೃದ್ಧಿಯೊಂದಿಗೆ 1265.23 ಕೋ.ರೂ.ಆಗಿದ್ದು, ಕಳೆದ ವರ್ಷದ ಈ ಅಧಿದಿಯಲ್ಲಿ ಅದು 1,125.58 ಕೋ.ರೂ.ಗಳಷ್ಟಿತ್ತು.
ಬ್ಯಾಂಕ್‌ನ ಒಟ್ಟು ವ್ಯವಹಾರವು (31.12.2019ಕ್ಕೆ) 126267 ಕೋ.ರೂ.ಗಳನ್ನು ತಲುಪಿದೆ. ಈ ವರ್ಷದಿಂದ ವರ್ಷಕ್ಕೆ ಶೇ 7.83ರ ಬೆಳವಣಿಗೆಯನ್ನು ಕಂಡಿದೆ. ಬ್ಯಾಂಕ್‌ನ ಠೇವಣಿಗಳು ಶೇ 9.54ರ ವೃದ್ಧಿಯೊಂದಿಗೆ 71356 ಕೋ.ರೂ.ಗಳನ್ನು ತಲುಪಿದ್ದು, ಕಳೆದ ವರ್ಷದ ಈ ಅವಧಿಯಲ್ಲಿ ಬ್ಯಾಂಕ್‌ನ ಠೇವಣಿಗಳು 65141 ಕೋ.ರೂ.ಗಳಾಗಿತ್ತು.
ಬ್ಯಾಂಕ್‌ನ ಮುಂಗಡಗಳು ಶೇ 5.68 ವೃದ್ಧಿಯೊಂದಿಗೆ 54911 ಕೋ.ರೂ.ಗಳನ್ನು ತಲುಪಿದ್ದು, ಕಳೆದ ವರ್ಷದ ಈ ಅವಧಿಯಲ್ಲಿ ಬ್ಯಾಂಕ್‌ನ ಮುಂಗಡಗಳು 51961 ಕೋ.ರೂ.ಗಳಷ್ಟಿತ್ತು. ಅಂತೆಯೇ ರಿಟೈಲ್ ಮುಂಗಡಗಳು ಕೂಡಾ ಶೇ 12.47 ವೃದ್ಧಿಯನ್ನು ಕಂಡಿವೆ.
ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿಂದು ತೃತೀಯ ತ್ರೈಮಾಸಿಕದ ಫಲಿತಾಂಶಗಳನ್ನು ಘೋಷಿಸಿದ ಬ್ಯಾಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಮಹಾಬಲೇಶ್ವರ ಎಂ.ಎಸ್. ಮಾತನಾಡಿ ಬ್ಯಾಂಕ್ ಸತತವಾಗಿ ಸುಸ್ಥಿರ ಫಲಿತಾಂಶಗಳನ್ನು ನೀಡುತ್ತಾ ಬಂದಿದೆ. ಈ ಪ್ರಸಕ್ತ ವರ್ಷದ ತೃತೀಯ ತ್ರೈಮಾಸಿಕದ ಫಲಿತಾಂಶಗಳು ನಿರೀಕ್ಷೆಯಂತೆ ಉತ್ತಮವಾಗಿವೆ. ಉತ್ತಮ ನಿರ್ವಹಣಾ ಲಾಭದಿಂದಾಗಿ ಬ್ಯಾಂಕ್‌ನ ಪ್ರಾಷನ್ ಕವರೇಜ್ ರೇಯೋ ಉತ್ತಮಗೊಂಡಿದ್ದು, ಡಿ.2018ರ ಅಂತ್ಯಕ್ಕೆ ಇದ್ದ ಪಿಸಿಆರ್ ಶೇ 57.20ರಿಂದ ಈಗ ಶೇ. 59.34ಗೆ ತಲುಪಿದೆ. ಅದಲ್ಲದೆ ಬ್ಯಾಂಕ್‌ನ ರಿಟೈಲ್ ಹಾಗೂ ಮಿಡ್ ಕಾರ್ಪೊರೇಟ್ ಸಾಲಗಳು ಶೇ. 11.71ರ ವೃದ್ಧಿಯನ್ನು ದಾಖಲಿಸಿದ್ದು, ಇದು ಬ್ಯಾಂಕಿನ ಬೆಳವಣಿಗೆಗೆ ವೇಗೋತ್ಕರ್ಷವನ್ನು ಒದಗಿಸಲಿದೆ. ಬ್ಯಾಂಕ್ ಈಗಾಗಲೇ ತನ್ನ ರಿಟೈಲ್ ಸಾಲಗಳನ್ನು ಅಂದರೆ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳನ್ನು ಡಿಜಿಟಲ್ ತಂತ್ರಜ್ಞಾನ ಆಧಾರಿತ ಪ್ರಕ್ರಿಯೆಗೆ ಅಳವಡಿಸಿ ಕೇವಲ 5 ರಿಂದ 20 ನಿಮಿಷಗಳ ಅವಧಿಯಲ್ಲಿಯೇ ಮಂಜೂರು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ವಿಧಾನವನ್ನು ಎಂಎಸ್‌ಎಂಇ ಸಾಲಗಳಿಗೂ ವಿಸ್ತರಿಸಲಿದ್ದೇವೆ.ಒಟ್ಟಿನಲ್ಲಿ ಬ್ಯಾಂಕ್‌ನ ಅಭಿವೃದ್ಧಿಯು ನಿರೀಕ್ಷಿತ ನಿಟ್ಟಿನಲ್ಲಿ ಆಶಾದಾಯಕವಾಗಿದೆ ಎಂದು ಮಹಾಬಲೇಶ್ವರ ಎಂ.ಎಸ್. ಹರ್ಷ ವ್ಯಕ್ತಪಡಿಸಿದ್ದಾರೆ.