ಜಮ್ಮುಕಾಶ್ಮೀರಕ್ಕೆ 36 ಕೇಂದ್ರ ಸಚಿವರ ತಂಡದ ಭೇಟಿಗೆ ಕಾಂಗ್ರೆಸ್ ಟೀಕೆ

Update: 2020-01-16 16:58 GMT
ಫೈಲ್ ಚಿತ್ರ

ಹೊಸದಿಲ್ಲಿ,ಜ.16: ಜಮ್ಮುಕಾಶ್ಮೀರಕ್ಕೆ 36 ಮಂದಿ ಕೇಂದ್ರ ಸಚಿವರನ್ನು ಕಳುಹಿಸುವ ಮೋದಿ ಸರಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ಪಕ್ಷ ಗುರುವಾರ ತೀವ್ರ ವಾಗ್ದಾಳಿ ನಡೆಸಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮುಕಾಶ್ಮೀರದಲ್ಲಿ ಎಲ್ಲವೂ ಸರಿಯಿದೆಯೆಂದು ಕೇಂದ್ರ ಸರಕಾರ ಹೇಳುತ್ತಿರುವಾಗ ಅಲ್ಲಿಗೆ ಸಚಿವರ ನಿಯೋಗವನ್ನು ಕಳುಹಿಸುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದೆ.

‘‘ಕಾಶ್ಮೀರದಲ್ಲಿ ಎಲ್ಲವೂ ಸಹಜವಾಗಿದೆಯೆಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳುತ್ತಾರೆ’’ ಎಂದು ಕಾಂಗ್ರೆಸ್ ನಾಯಕ ಕಪಿಲ್‌ಸಿಬಲ್ ಟ್ವೀಟಿಸಿದ್ದಾರೆ. ಒಂದು ವೇಳೆ ಹಾಗಿದ್ದಲ್ಲಿ, ಕಾಶ್ಮೀರಕ್ಕೆ 36 ಮಂದಿ ‘ ಪ್ರಚಾರಕ’ರನ್ನು ಯಾಕೆ ಕಳುಹಿಸಬೇಕು?. ಪ್ರಚಾರಕರಲ್ಲದವರನ್ನು ಅಲ್ಲಿಗೆ ತೆರಳಲು ಹಾಗೂ ಅಲ್ಲಿನ ಪ್ರಸಕ್ತ ಪರಿಸ್ಥಿತಿ ತಿಳಿದುಕೊಳ್ಳಲು ಯಾಕೆ ಬಿಡಲಾಗುತ್ತಿಲ್ಲ? ’ ಎಂದು ಅವರು ಕೇಳಿದ್ದಾರೆ.

   ಕಾಶ್ಮೀರಕ್ಕೆ 36 ಮಂದಿ ಕೇಂದರ ಸಚಿವರನ್ನು ಕಳುಹಿಸುತ್ತಿರುವುದು ಗಾಬರಿಯ ಸಂಕೇತವೇ ಹೊರತು, ಸಹಜತೆಯಲ್ಲ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ತಿವಾರಿ ಟ್ವೀಟಿಸಿದ್ದಾರೆ. ‘‘ ಸಂವಿಧಾನದ 370ನೆ ವಿಧಿಯ ರದ್ದತಿಯು ಒಂದು ಮಹಾಪ್ರಮಾದಾಗಿದೆ ಹಾಗೂ ಅದನ್ನು ದಿಢೀರ್ ಸರಿಪಡಿಸಲು ಸಾಧ್ಯವಿಲ್ಲ ಎಂದಿರುವ ಅವರು ಜನಪ್ರಿಯ ಆಂಗ್ಲ ಶಿಶುಕವಿತೆ ‘ಹಂಪ್ಟಿ ಡಂಪ್ಟಿ ಹ್ಯಾಡ್ ಎ ಗ್ರೇಟ್ ಫಾಲ್...’ ಅನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ.

ಜಮ್ಮುಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿಯಿಂದ ಉಂಟಾಗಲಿರುವ ಸಕಾರಾತ್ಮಕ ಪರಿಣಾಮದ ಬಗ್ಗೆ ಜನಜಾಗೃತಿ ಮೂಡಿಸಲು ಕೇಂದ್ರ ಸಚಿವರ ತಂಡವೊಂದು ಜನವರಿ 18ರಿಂದ ಜನವರಿ 24ರವರೆಗೆ ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಲಿದೆ. ಕಳೆದ ವರ್ಷದ ಆಗಸ್ಟ್ 5ರಂದು ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದುಪಡಿಸಿ, ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಬಳಿಕ ಕೇಂದ್ರ ಸಚಿವರ ತಂಡ ನೀಡುತ್ತಿರುವ ಚೊಚ್ಚಲ ಭೇಟಿ ಇದಾಗಿದೆ.

ಜಮ್ಮುಕಾಶ್ಮೀರ ಹಾಗೂ ಅಲ್ಲಿನ ಜನರ ಸಮಗ್ರ ಅಭಿವೃದ್ಧಿಗೆ ಸರಕಾರದ ಜಾರಿಗೊಳಿಸಿರವ ನೀತಿಗಳು ಹಾಗೂ ಕಳೆದ ಐದು ತಿಂಗಳುಗಳಲ್ಲಿ ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೈಗೊಂಡಿರುವ ನಿಯಮಗಳ ಬಗ್ಗೆ ಮಾಹಿತಿಯನ್ನು ನೀಡಲು ಕೇಂದ್ರ ಸಂಪುಟದ ಎಲ್ಲಾ ಸಚಿವರು ಜಮ್ಮುಕಾಶ್ಮೀರಕ್ಕೆ ಭೇಟಿ ನೀಡಬೇಕೆಂದು ಅಮಿತ್ ಶಾ ಬಯಸಿದ್ದಾರೆಂದು ಗೃಹಖಾತೆಯ ಸಹಾಯಕ ಸಚಿವ ಜಿ.ಕಿಶನ್ ರೆಡ್ಡಿ ಕಳುಹಿಸಿರುವ ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News