ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಕಡೆಗಣನೆಗೆ ಹಕ್ಕುಚ್ಯುತಿ ಮಂಡನೆ: ಶಾಸಕ ಯು.ಟಿ.ಖಾದರ್

Update: 2020-01-16 17:20 GMT

ಮಂಗಳೂರು, ಜ.16: ಉಳ್ಳಾಲ ಒಂಭತ್ತುಕೆರೆಯಲ್ಲಿ 2.70 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿರುವ ಪ್ರಕೃತಿ ವಿಕೋಪ ಸಂತ್ರಸ್ತರ ಆಶ್ರಯ ತಾಣದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ತನ್ನನ್ನು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗಿದ್ದು, ಈ ಬಗ್ಗೆ ವಿಧಾನ ಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವುದಾಗಿ ಸ್ಥಳೀಯ ಶಾಸಕ ಯು.ಟಿ. ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪಿಡಬ್ಲುಡಿ ಇಲಾಖೆಯಿಂದ ನಡೆಯಲಿರುವ ಈ ಕಾಮಗಾರಿಗೆ ಸಂಬಂಧಿಸಿ ಹೆಚ್ಚಿನ ಆಸಕ್ತಿ ವಹಿಸಿ ಕ್ರಮ ವಹಿಸಿದ್ದೆ. ಆದರೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅಧಿಕಾರಿಗಳು ನನ್ನನ್ನು ಮಾತ್ರವಲ್ಲದೆ, ಸ್ಥಳೀಯ ನಾಲ್ವರು ಕೌನ್ಸಿಲರ್‌ಗಳು, ಶಾಲಾ ಸಮಿತಿಯ ಅಧ್ಯಕ್ಷರು ಅಥವಾ ಸದಸ್ಯರು ಹಾಗೂ ಅಲ್ಲಿನ ಕ್ಲಬ್‌ಗಳ ಯಾರನ್ನೂ ಕರೆದಿಲ್ಲ. ಇದರಿಂದ ನೋವಾಗಿದೆ. ಇಲ್ಲಿ ನನ್ನ ಹಕ್ಕನ್ನು ಚ್ಯುತಿಗೊಳಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಉತ್ತರಿಸಬೇಕಾಗಿದೆ ಎಂದರು.

ಎನ್‌ಆರ್‌ಸಿಸಿ, ಸಿಎಎ ಗೊಂದಲ ನಿವಾರಿಸಿ

ಎನ್‌ಆರ್‌ಸಿ ಹಾಗೂ ಸಿಎಎ ಅನುಷ್ಠಾನಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಪೂರ್ವ ತಯಾರಿಗಳು ಅಥವಾ ಮಾಹಿತಿ ಸಂಗ್ರಹ ಕಾರ್ಯ ನಡೆಯುತ್ತಿಲ್ಲ ಎಂಬುದಾಗಿ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಪಲ್ಸ್ ಪೋಲಿಯೇ ಸೇರಿದಂತೆ ಇತರ ಜನಪರ ಯೋಜನೆಗಳಿಗೆ ಸಂಬಂಧಿಸಿ ಆಶಾ ಕಾರ್ಯಕರ್ತರು ಮನೆಗಳಿಗೆ ಮಾಹಿತಿ ಸಂಗ್ರಹಕ್ಕೆ ತೆರಳಿದಾಗ ಜನರು ಸಹಕರಿಸದಿರುವುದು ಗಮನಕ್ಕೆ ಬಂದಿದೆ. ಇದು ರಾಜ್ಯಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸ್ಪಷ್ಟತೆಯನ್ನು ನೀಡಬೇಕು ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಎನ್‌ಪಿಆರ್, ಸಿಸಿಎ ಅಥವಾ ಎನ್‌ಆರ್‌ಸಿಗೆ ಸಂಬಂಧಿಸಿ ಯಾವುದೇ ಆದೇಶ ಆಗಿಲ್ಲ. ಹಾಗಾಗಿ ಜನರು ಸರಕಾರಿ ನೌಕರರು ಇತರ ಯೋಜನೆಗಳಿಗೆ ಸಂಬಂಧಿಸಿ ಮನೆಗೆ ಬಂದಾಗ ಸಹಕರಿಸಬೇಕು. ಗೊಂದಲಪಡುವ ಅಗತ್ಯವಿಲ್ಲ. ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವ ಮೊದಲು ಓದಿಕೊಳ್ಳಬೇಕು. ಓದಲು ಬಾರದಿದ್ದರೆ ನೆರೆಮನೆಯವರ ಸಹಕಾರ ಪಡೆಯಬೇಕು. ಅದು ಬಿಟ್ಟು ಪಲ್ಸ್ ಪೋಲಿಯೋದಂತಹ ಜನಪರ ಕಾರ್ಯಗಳ ಬಗ್ಗೆ ಮಾಹಿತಿ ನೀಡಲು ಬಂದಾಗ ಅವರನ್ನು ಮನೆಗೆ ಬಾರಲು ಅವಕಾಶ ನೀಡದೆ ಕಳುಹಿಸಿದರೆ ಇದರಿಂದ ಮುಂದೆ ಜನರಿಗೇ ತೊಂದರೆ ಆಗುವುದು. ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಜನರನ್ನ ಮನವರಿಕೆ ಮಾಬೇಕು ಎಂದು ಅವರು ಹೇಳಿದರು.

ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿ, ಜನರ ಜತೆ ವಿಶ್ವಾಸದಿಂದ ಮಾಡಿದಾಗ ಯಾವ ಕಾರ್ಯವೂ ಅಸಾಧ್ಯವಲ್ಲ. ದೇಶದಲ್ಲಿ ಈ ರೀತಿ ಜನರಲ್ಲಿ ಗೊಂದಲ ಸೃಷ್ಟಿಗೆ ಕೇಂದ್ರ ಸರಕಾರವೇ ಕಾರಣ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News